
Mangalore: ವಿದ್ಯುತ್ ಅವಘಡ: ಮೆಸ್ಕಾ೦ನಿಂದ ವಿಷಾದ
ಮಂಗಳೂರು: ಮೆಸ್ಕಾಂ ಮಂಗಳೂರು ವಿಭಾಗ ವ್ಯಾಪ್ತಿಯ ರೊಸಾರಿಯೋ ಶಾಲೆ ಹಿಂಭಾಗ ನಿರೇಶ್ವಾಲ್ಯ ಪರಿವರ್ತಕದಿಂದ ಹೊರಡುವ ದಾರಿದೀಪದ ಲೈನ್ ಮೇಲೆ, ಬುಧವಾರ ರಾತ್ರಿ ಸುರಿದ ಜೋರಾದ ಗಾಳಿ-ಮಳೆಯಿಂದಾಗಿ ಹತ್ತಿರದಲ್ಲಿದ್ದ ಮರದ ಕೊಂಬೆ ಬಿದ್ದು, ತಂತಿ ತುಂಡಾಗಿರುತ್ತದೆ. ತುಂಡಾದ ತಂತಿಯಿಂದ ದೇವರಾಜ್ ಮತ್ತು ರಾಜು ಎಂಬವರುಗಳಿಗೆ ವಿದ್ಯುತ್ ತಗುಲಿ ಮಾರಾಣಾಂತಿಕ ಅಪಘಾತವಾಗಿರುತ್ತದೆ.
ಮಳೆಗಾಲದಲ್ಲಿ ಎದುರಾಗುವ ಸಂಭಾವ್ಯ ಅವಘಡಗಳನ್ನು ತಪ್ಪಿಸಲು ಮೆಸ್ಕಾಂ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಂಡಿದಾಗ್ಯೂ ಪ್ರಾಕೃತಿಕ ವಿಕೋಪದಿಂದ ಈ ಅವಘಡ ನಡೆದಿದೆ. ಘಟಿಸಬಾರದ ಘಟನೆ ನಡೆದಿರುವುದಕ್ಕೆ ಮೆಸ್ಕಾಂ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ.
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಖುದ್ದಾಗಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುತ್ತಾರೆ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಚರ್ಚಿಸಿ ಮೃತರ ಅವಲಂಬಿತರಿಗೆ ಸಾಂತ್ವನಧನವನ್ನು ಮಂಜೂರು ಮಾಡಲಾಗಿರುತ್ತದೆ.
ಪ್ರಕೃತಿ ವಿಕೋಪವನ್ನು ತಡೆಯಲು ಮೆಸ್ಕಾಂನಿಂದ ಎಲ್ಲಾ ಕ್ರಮಕೈಗೊಳ್ಳಲಾಗಿರುತ್ತದೆ. ಮೆಸ್ಕಾಂನ ಎಲ್ಲಾ ಅಧಿಕಾರಿಗಳು ಮತ್ತು ಕ್ಷೇತ್ರ ಸಿಬ್ಬಂದಿಗೆ ಅಪಾಯಕಾರಿ ಸ್ಥಳಗಳನ್ನು ತೀವ್ರಗತಿಯಲ್ಲಿ ಗುರುತಿಸಿ, ಮುಂಜಾಗ್ರತಾಕ್ರಮ ವಹಿಸಲು ಈಗಾಗಲೇ ಸೂಚಿಸಲಾಗಿದೆ. ಅಪಾಯಕಾರಿ ವಿದ್ಯುತ್ ಮಾರ್ಗಗಳು ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಮೆಸ್ಕಾಂ ಕಚೇರಿಗೆ ಅಥವಾ ಸಹಾಯವಾಣಿ ಸಂಖ್ಯೆ 1912ಗೆ ಮಾಹಿತಿ ನೀಡುವಂತೆ ಮೆಸ್ಕಾಂ ಪಕಟ್ರಣೆಯಲ್ಲಿ ಕೋರಿದೆ.
‘ಗಾಳಿ ಮಳೆಯಿಂದ ಉಂಟಾಗುವ ಸಂಭಾವ್ಯ ಅವಘಡಗಳನ್ನು ತಪ್ಪಿಸಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದಾಗಿಯೂ ಪ್ರಾಕೃತಿಕ ವಿಕೋಪದಿಂದ ಈ ದುರ್ಘಟನೆ ನಡೆದಿರುವುದು ದುಃಖಕರ ವಿಷಯ. ಮುಂದಿನ ದಿನಗಳಲ್ಲಿ ಮೆಸ್ಕಾಂನಿಂದ ಇನ್ನೂ ಪರಿಣಾಮಕಾರಿಯಾಗಿ, ವಿದ್ಯುತ್ ಲೈನ್‌ಗಳನ್ನು/ಸ್ಥಳಗಳನ್ನು ಪರಿಶೀಲಿಸಿ ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮೆಸ್ಕಾಂ ವ್ಯಾಪ್ತಿಯ ಎಲ್ಲಾ ಕ್ಷೇತ್ರಾಧಿಕಾರಿಗಳಿಗೆ ಪುನಃ ಸೂಚನೆ ಕೊಟ್ಟಿರುತ್ತೇನೆ. ಸಾರ್ವಜನಿಕರು ತುಂಡಾಗಿ ಬಿದ್ದಿರುವ ಮೆಸ್ಕಾಂನ ವಿದ್ಯುತ್ ತಂತಿ ಮತ್ತಿತರ ಉಪಕರಣಗಳನ್ನು ಮುಟ್ಟಬಾರದು. ಇಂತಹ ಸನ್ನಿವೇಶಗಳು ಕಂಡುಬಂದಲ್ಲಿ ಮೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಅಥವಾ ಹತ್ತಿರದ ಮೆಸ್ಕಾಂ ಕಚೇರಿಗೆ ಮಾಹಿತಿ ನೀಡುವಂತೆ ಮನವಿ ಮಾಡುತ್ತೇನೆ. -ಡಿ.ಪದ್ಮಾವತಿ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು.