Mangalore: ಉತ್ತಮ ಆಹಾರ ತಯಾರಿಕೆಯೂ ಒಂದು ಕಲೆ: ಪೃಥ್ವಿರಾಜ್ ರೈ ಕೆ.
ಮಂಗಳೂರು: ಆಹಾರ ಎಲ್ಲರ ಅವಶ್ಯಕತೆಯಾಗಿದ್ದು, ಆಹಾರ ತಯಾರಿಸುವುದು ಕೂಡ ಒಂದು ಕಲೆ. ಆರೋಗ್ಯ ದೃಷ್ಟಿಯಿಂದ ಗುಣಮಟ್ಟದ ಆಹಾರ ಸೇವನೆ ಮಾಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಉತ್ತಮ ಆಹಾರ ತಯಾರಿಸಿ, ಎಲ್ಲರಿಗೂ ಒದಗಿಸುವುದು ಕಲೆಯಾಗಿದೆ. ಈ ಕಲೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಮಂಗಳೂರು ವಕೀಲ ಸಂಘದ ಕಾರ್ಯದರ್ಶಿ ಪೃಥ್ವಿರಾಜ್ ರೈ ಕೆ. ತಿಳಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಬಿಬಿಎ ಮತ್ತು ಬಿಎ ಪ್ರವಾಸೋದ್ಯಮ ವಿಭಾಗದ ಜಂಟಿ ಆಶ್ರಯದಲ್ಲಿ ನಡೆದ ಅಟ್ಟಿಲ್-2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ಸ್ವಚ್ಛ ಆಹಾರ ತಯಾರಿಸುವ ಕಲೆ ರೂಢಿಸಿಕೊಳ್ಳಬೇಕು. ಇದರಿಂದ ಉತ್ತಮ ಆರೋಗ್ಯವೂ ಸಿದ್ಧಿಸುತ್ತದೆ. ವಿದ್ಯಾರ್ಥಿಗಳಿಗೆ ಈ ಅನುಭವವನ್ನು ನೀಡಲು ಅಟ್ಟಿಲ್-೨೦೨೪ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ. ಅನಸೂಯ ರೈ, ಇದು ಮನೋರಂಜನೆಗಾಗಿ ಕೈಗೊಂಡ ಕಾರ್ಯಕ್ರಮ ಅಲ್ಲ. ಆಹಾರ ಮತ್ತು ಆಹಾರ ನಿರ್ವಹಣೆ ಪ್ರವಾಸೋದ್ಯಮದ ಭಾಗವಾಗಿದ್ದು, ಪ್ರತಿಯೊಬ್ಬರಲ್ಲೂ ಈ ಕೌಶಲ್ಯ ಇರಬೇಕು. ಆಹಾರ ತಯಾರಿಸುವಿಕೆ, ಟೇಬಲ್ ವಿನ್ಯಾಸ, ಆಹಾರ ಒದಗಿಸುವ ಕ್ರಮ ಇತ್ಯಾದಿಗಳೆಲ್ಲವೂ ಆಹಾರದ ಕಡೆ ಜನರನ್ನು ಆಕರ್ಷಿಸುವಂತೆ ಮಾಡುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಆಹಾರ ಮನುಷ್ಯನ ಮೂಲಭೂತ ಅವಶ್ಯಕತೆ. ಇದು ಇಂದು ಹಬ್ಬವಾಗಿ ಪರಿಣಮಿಸಿದೆ. ಪ್ರವಾಸೋದ್ಯಮ ವಿದ್ಯಾರ್ಥಿಗಳಿಗೆ ಸ್ವತಂತ್ರವಾಗಿ ಬದುಕುವ ಕೌಶಲ್ಯ ಇಂತಹ ಕಾರ್ಯಕ್ರಮದಿಂದ ಲಭ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಬಿಎ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಡಾ. ಜಗದೀಶ್, ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ. ಸಿದ್ಧರಾಜು ಎಂ. ಎನ್., ಬಿಬಿಎ ಮತ್ತು ಬಿಎ ಪ್ರವಾಸೋದ್ಯಮ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.