
Moodubidire: ಅಲಂಗಾರಿನ ಶಿಥಿಲ ಮನೆಗೆ ದೊರಕಿತು ದಾನಿಗಳ ‘ಆಶೀರ್ವಾದ’
ಮೂಡುಬಿದಿರೆ: ಆಲಂಗಾರಿನ ಆಶ್ರಯ ಕಾಲನಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಬಡ ಕುಟುಂಬವೊಂದರ ಮನೆಯನ್ನು ದುರಸ್ಥಿಗೊಳಿಸಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಮೂಡುಬಿದಿರೆಯ ಐರಾವತ ಆಂಬುಲೆನ್ಸ್ ಮಾಲಕ-ಚಾಲಕ ಅನಿಲ್ ಮೆಂಡೋನ್ಸಾ ಅವರು ‘ಆಶೀರ್ವಾದ’ವನ್ನು ಕಂಗೊಳಿಸುವಂತೆ ಮಾಡಿದ್ದಾರೆ.
ಆಲಂಗಾರಿನ ಆಶ್ರಯ ಕಾಲನಿಯ ಬಡಕುಟುಬದ ರಾಜು, ಪತ್ನಿ ಸುಶೀಲಾ ಮತ್ತು ಕಿರಿಯ ಪುತ್ರಿ ರಕ್ಷಿತಾ ವಾಸವಾಗಿದ್ದ ಈ ಮನೆಯು ಒಂದು ತಿಂಗಳ ಹಿಂದೆ ವಿದ್ಯುತ್ ಬೆಳಕಿಲ್ಲದ, ಗೋಡೆ, ಸೂರು ಬಿರುಕುಬಿಟ್ಟು ಶಿಥಿಲಾವಸ್ಥೆಯಲ್ಲಿತ್ತು. ಈ ಬಗ್ಗೆ ಪತ್ರಿಕೆಯೊಂದು ಸುದ್ದಿ ಪ್ರಕಟಿಸಿತ್ತು. ಇದು ಅನಿಲ್ ಮೆಂಡೋನ್ಸಾ ಅವರ ಗಮನಕ್ಕೆ ಬಂದಿತ್ತು. ಈ ಕೆಲವೇ ತಿಂಗಳ ಹಿಂದೆ, ಕರಿಂಜೆಯಲ್ಲಿ ಬಡ ಕುಟುಂಬವೊಂದಕ್ಕೆ ದಾನಿಗಳ ನೆರವಿನಿಂದ ಸುಂದರ ಮನೆ, ದೈವಗಳಿಗೆ ನೆಲೆ ಕಲ್ಪಿಸಿಕೊಟ್ಟ ಅವರಿಗೆ ಸುಶೀಲಾ-ರಾಜು ಅವರ ಮನೆಯ ದುರವಸ್ಥೆ ಗೋಚರಿಸಿ ಅದರ ಪುನರುತ್ಥಾನಕ್ಕೆ ಮುಂದಾದರು.
ಮೂಡುಬಿದಿರೆಯ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಅನಿಲ್ ಅವರನ್ನು ಕರೆಸಿ, ಪ್ರಾಥಮಿಕವಾಗಿ 10,000 ರೂ. ಕಾಲುದೀಪ, ತಟ್ಟೆನಗದು ನೀಡಿ ಕೆಲಸ ಆರಂಭಿಸಲು ಚಾಲನೆ ನೀಡಿದರು. ಮುಂದೆ ದಾನಿಗಳ ನೆರವಿನಿಂದ ಮನೆ ಮರು ನಿರ್ಮಾಣವಾಯಿತು. ಅನಿಲ್ ನಾಡಿನ ಮಂಡೋದ್ರಾ ಅವರ ಮನವಿಗೆ ಹಲವರು ಆಗಿ ಸ್ಪಂದಿಸಿದ್ದಾರೆ. ವಾರ್ಡ್ ಸದಸ್ಯ ಪಿ.ಕೆ. ಥಾಮಸ್, ರುಝ ಆನ್ ಫ್ರೆಂಟ್ಸ್ ಗಂಟಾಲ್ಕಟ್ಟೆಯ ರೋಶನ್ ಮಿರಾಂದ, ರವಿ ಅಲ್ಯುಮಿನಿಯಂನವರು, ಮಂಗಳೂರಿನ ಸೀಮಾ ಫರ್ನಾಂಡಿಸ್, ಜೋನ್ ರೇಗೋ ಹಾಗೂ ಇನ್ನೂ ಹಲವಾರು ಸಹಕರಿಸಿದ್ದಾರೆ. ಶ್ರೀಗಳಿಂದ ಶಿಕ್ಷಣಕ್ಕೂ ನೆರವು ಇದೀಗ ಮನೆಯ ಹುಡುಗಿ ಬನ್ನಡ್ಕದಲ್ಲಿರುವ ಮಂ.ವಿ.ವಿ. ಕಾಲೇಜಿನಲ್ಲಿ ಪ್ರಥಮ ಪದವಿ ತರಗತಿಗೆ ಸೇರ್ಪಡೆಗೊಂಡಿರುವ ರಕ್ಷಿತಾಗೆ ಭಟ್ಟಾರಕರು ಬರೆಯುವ ಪುಸ್ತಕಗಳು, ಲೇಖನಿ ಸಾಮಗ್ರಿ, ಚಾಪೆ, ಚಾದರ, ಅಕ್ಕಿ ಬಾಲ್ಡಿ ಜಪಸರ ಇತ್ಯಾದಿ ನೀಡಿ ಹರಸಿ ಮುಂದೆಯೂ ಶೈಕ್ಷಣಿಕವಾಗಿ ಯಥಾಸಾಧ್ಯ ನೆರವು ನೀಡುವುದಾಗಿ ತಿಳಿಸಿದರು.
‘ಆಶೀರ್ವಾದ’ ಗೃಹಪ್ರವೇಶ:
ಅನಿಲ್ ಮೆಂಡೋನ್ಸಾ ಅವರ ಕಾಳಜಿಯೊಂದಿಗೆ ದಾನಿಗಳ ಸಹಕಾರದಿಂದ ಸುಸಜ್ಜಿತವಾದ ಸೂರು ‘ಆಶೀರ್ವಾದ’ ಎದ್ದು ನಿಂತಿದ್ದು ಇದರ ಗೃಹಪ್ರವೇಶವು ಭಾನುವಾರ ನಡೆಯಲಿದೆ. ಅಂದೇ ಈ ಸೂರು ಬಡ ಕುಟುಂಬಕ್ಕೆ ಹಸ್ತಾಂತರಗೊಳ್ಳಲಿದೆ.