
Moodubidire: ಸಿಡಿಲು ಬಡಿದಿದ್ದ ತೆಂಗಿನ ಮರದಿಂದ ಬಿದ್ದು ಕೂಲಿ ಕಾರ್ಮಿಕ ಸಾವು
Friday, June 14, 2024
ಮೂಡುಬಿದಿರೆ: ಸಿಡಿಲು ಬಡಿದು ಹಾನಿಗೊಳಗಾಗಿದ್ದ ತೆಂಗಿನ ಮರವನ್ನು ಕಡಿಯಲು ಹತ್ತಿದ್ದ ಕೂಲಿ ಕಾರ್ಮಿಕರೊಬ್ಬರು ತೆಂಗಿನ ಮರ ತುಂಡಾಗಿ ಕೆಳಗೆ ಬಿದ್ದ ಪರಿಣಾಮವಾಗಿ ಸಾವನ್ನಪ್ಪಿದ ಘಟನೆ ಪಡುಮಾರ್ನಾಡು ಗ್ರಾಮದ ಬಸವನಕಜೆ ಎಂಬಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ನಡೆದಿದೆ.
ಸಾವನ್ನಪ್ಪಿದ ಕೂಲಿ ಕಾರ್ಮಿಕ ಅಲಂಗಾರು ಚಂದ್ರಾಪುರ ನಿವಾಸಿ ನವೀನ್ ಪ್ರಕಾಶ್ ರೋಡ್ರಿಗಸ್ (40) ಎಂದು ತಿಳಿದು ಬಂದಿದೆ.
ನಿವೃತ್ತ ಅಬಕಾರಿ ನಿರೀಕ್ಷಕ ದೇವೋಜಿ ರಾವ್ ಅವರ ಮನೆಯ ತೆಂಗಿನ ಮರಕ್ಕೆ ಸಿಡಿಲು ಬಡಿದು ಹಾನಿಯಾಗಿತ್ತು. ಈ ಮರವನ್ನು ಕಡಿಯಲೆಂದು ನವೀನ್ ಮರ ಏರಿದ್ದ. ಮರ ಅರ್ಧ ಹತ್ತಿದ್ದಾಗ ಮರ ತುಂಡಾಗಿ ಕೆಳಕ್ಕೆ ಬಿದ್ದಿತ್ತು. ಜತೆಯಲ್ಲಿ ನವೀನ್ ಕೂಡ ನೆಲಕ್ಕೆ ಬಿದ್ದು ಗಂಭೀರ ಏಟಾಗಿ ಮೃತಪಟ್ಟರೆನ್ನಲಾಗಿದೆ.
ಮೃತರು ಪತ್ನಿ, ಓರ್ವ ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.