
Moodubidire: ಎರಡನೇ ವರ್ಷದ ಆಳ್ವಾಸ್ ಹಲಸು ಮೇಳ ‘ಸಮೃದ್ಧಿ’ಗೆ ಚಾಲನೆ
ಕೃಷಿಯನ್ನು ನಂಬಿದರೆ ಅದು ನಮ್ಮ ಕೈ ಬಿಡಲ್ಲ: ರಾಜೇಶ್ ನಾಯಕ್
ಮೂಡುಬಿದಿರೆ: ಜಿಡಿಪಿ ಕೃಷಿ ಕ್ಷೇತ್ರದಿಂದ ಶೇ ೧೪ರಷ್ಟು ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ ಉಳಿದಂತೆ ಶೇ ೬೦ರಷ್ಟು ಜನರು ಕೃಷಿಯನ್ನು ಅವಲಂಬಿಸಿದರೆ ಜೀವನಮಟ್ಟ ಬೆಳೆಸಲು ಮೋದಿ ಸರಕಾರ ಸಹಕಾರ ನೀಡುತ್ತದೆ ಎಂದು ಬಂಟ್ವಾಳದ ಶಾಸಕ ರಾಜೇಶ್ ನಾಯಕ್ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.), ಮೂಡುಬಿದಿರೆ ಅಳ್ವಾಸ್ ಆಹಾರೋತ್ಸವ ಮಹಾಮೇಳ ಸಮಿತಿ, ಮೂಡುಬಿದಿರೆ ಕೃಷಿ ಇಂಜಿನಿಯರಿಂಗ್ ವಿಭಾಗ ಮತ್ತು ಆಳ್ವಾಸ್ ತಾಂತ್ರಿಕ ಕಾಲೇಜು ಮಿಜಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ ಋಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ ಎರಡನೇ ವರ್ಷದ ಹಲಸು-ವೈವಿಧ್ಯಮಯ ಹಣ್ಣುಗಳು, ಆಹಾರೋತ್ಸವ ಹಾಗೂ ಕೃಷಿಪರಿಕರಗಳ ಪ್ರದರ್ಶನ ಮತ್ತು ಮಾರಾಟ ಮಹಾಮೇಳ ‘ಸಮೃದ್ಧಿ’ಯನ್ನು ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ನಾವು ಎರಡು ತಿಂಗಳು ಕೃಷಿಯಲ್ಲಿ ತೊಡಗಿಸಿಕೊಂಡರೆ ಅದು ನಮ್ಮನ್ನು ೧೨ ತಿಂಗಳು ಕುಳಿತು ತಿನ್ನುವಂತೆ ಮಾಡುತ್ತದೆ. ಕೃಷಿಯನ್ನು ನಂಬಿದರೆ ಅದು ಯಾವತ್ತೂ ನಮ್ಮ ಕೈ ಬಿಡಲ್ಲ. ಎರಡು ಮೂರು ತಲೆಮಾರಿನ ಹಿಂದೆ ಸರಿದು ನೋಡಿದಾಗ ನಮ್ಮ ಹಿರಿಯರು ಬೇರೆ ಬೇರೆ ಉದ್ಯೋಗ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರೂ ಅವರ ಮೂಲ ವ್ಯವಹಾರ ಕೃಷಿಯೇ ಆಗಿತ್ತು ಎಂದರು.
ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ ಬಡವರ ಹಸಿವನ್ನು ತಣಿಸುವ ಹಣ್ಣು ಹಲಸು. ಇದರಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾಗುವಂತಹ ಪೋಷಕಾಂಶಗಳು ಸಮೃದ್ಧವಾಗಿದೆ. ಅವಿಭಜಿತ ಜಿಲ್ಲೆಯ ಜನರು ಇದನ್ನು ಸೇವಿಸುತ್ತಾರೆ. ಆದರೆ ಯಾವುದೇ ಆಹಾರವನ್ನು ಹಿತಮಿತವಾಗಿ ಸೇವಿಸಿದರೆ ಉತ್ತಮ. ಹಡಿಲು ಬಿದ್ದಿರುವ ಭೂಮಿಯನ್ನು ಕೃಷಿ ಮಾಡಲು ಸರಕಾರಗಳು ಮನಸು ಮಾಡಬೇಕು. ಆಳ್ವಾಸ್‌ನಂತಹ ಸಂಸ್ಥೆಗಳ ಮೂಲಕ ತರಬೇತಿಯನ್ನು ನೀಡಲು ಸಹಕಾರ ಪಡೆದುಕೊಂಡರೆ ಉತ್ತಮ ಎಂದ ಅವರು ಪ್ರಕೃತಿಯೊಂದಿಗೆ ಬದುಕುವ ಕಲೆಯನ್ನು ಕೃಷಿ ನೀಡಲಿ ಎಂದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಕೆ. ಶ್ರೀಪತಿ ಭಟ್, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ., ಎಂ.ಸಿ.ಎಸ್. ಬ್ಯಾಂಕ್‌ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ, ಕೃಷಿಕ ಮುಳಿಯ ವೆಂಕಟ ಕೃಷ್ಣ ಶರ್ಮ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್ ಸತೀಶ್, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಬಿ. ಧನಂಜಯ್, ಕೃಷಿ ಜಂಟಿ ನಿರ್ದೇಶಕ ಕೆಂಪೇಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಉದ್ಯಮಿ ಮೊಹಮ್ಮದ್ ಶರೀಫ್, ಕಷಿಕರಾದ ರಾಜವರ್ಮ ಬೈಲಂಗಡಿ, ಧನಕೀರ್ತಿ ಬಲಿಪ, ಸುಭಾಷ್ ಚೌಟ, ಪ್ರವೀಣ್ ಉಪಸ್ಥಿತರಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಹಾಮೇಳಕ್ಕೆ ಭೇಟಿ ನೀಡಿದರು.