
Moodubidire: ಮೂಡುಬಿದಿರೆ ಯುವವಾಹಿನಿ ಅರಿವು, ಸಮ್ಮಾನ, ಯುವಸಿರಿ ಪುರಸ್ಕಾರ ಪ್ರದಾನ
ಗುರುಗಳ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಿ :ತಾರಾನಾಥ ಪೂಜಾರಿ ಅಭಿಮತ: ಇರುವೈಲು ತಾರಾನಾಥ ಪೂಜಾರಿ
ಮೂಡುಬಿದಿರೆ: ನಾವು ಗುರುಗಳ ಹಿಂಬಾಲಕರಾಗಿ ಬದುಕಿದರೆ ಸಾಲದು ಬದಲಾಗಿ ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ದೇವೆ ಎಂಬುದು ಮುಖ್ಯ ಎಂದು ರಾಜ್ಯ ಹೈಕೋರ್ಟ್ ನಿರ್ದೇಶಿತ ಹಿರಿಯ ನ್ಯಾಯವಾದಿ ಇರುವೈಲು ತಾರಾನಾಥ ಪೂಜಾರಿ ಪ್ರಶ್ನಿಸಿದ್ದಾರೆ.
ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಮೂಡುಬಿದಿರೆ ಘಟಕದ ವತಿಯಿಂದ ಭಾನುವಾರ ಶ್ರೀ ನಾರಾಯಣ ಗುರುಗಳ ಜೀವನ-ಸಂದೇಶ ಗೋ ಅರಿವು-2024, ಸಮ್ಮಾನ, ಯುವಸಿರಿ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯೆಯ ಮೇಲೆ ಹಿಡಿತ ಸಾಧಿಸಲು ಎಷ್ಟು ಬುದ್ಧಿವಂತರಾದರೂ ಪ್ರಯೋಜನವಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಪರಿಶ್ರಮ, ಶಿಸ್ತು ಮತ್ತು ಪ್ರಯತ್ನ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾನು ಇಂತಹ ವೇದಿಕೆಯಿಂದ ಪ್ರೋತ್ಸಾಹವನ್ನು ಪಡೆದಿದ್ದೇನೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಕ್ಕಿದರೆ ಮಾತ್ರ ಅವರು ಯಶಸ್ಸನ್ನು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಯುವವಾಹಿನಿಯು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಯುವವಾಹಿನಿ ಅಧ್ಯಕ್ಷ ಶಂಕರ ಎ. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಭಾನುಮತಿ ಶೀನಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಚಿಂತಕ, ಶಿಕ್ಷಕ ಅರವಿಂದ ಚೊಕ್ಕಾಡಿ ಗುರು ಸಂದೇಶ ನೀಡಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮಾರ್ಗದರ್ಶನವಿತ್ತರು. 2023-24ನೇ ಸಾಲಿನಲ್ಲಿ ಎಸೆಸೆಲ್ಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ 30 ಮಂದಿ ಬಿಲ್ಲವ ವಿದ್ಯಾರ್ಥಿಗಳಿಗೆ ನಗದುಸಹಿತ ‘ಯುವಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಮೂಡುಬಿದಿರೆ ವ್ಯಾಪ್ತಿಯಲ್ಲಿ ಪ್ರಥಮ ಸ್ಥಾನ ಪಡೆದ ಮಾನ್ಯ ಎನ್. ಪೂಜಾರಿ, ಪಿಯುಸಿಯಲ್ಲಿ ಮೂರು ವಿಭಾಗಗಳಲ್ಲಿ ಅತ್ಯಧಿಕ ಅಂಕ ಪಡೆದ ಶ್ರೇಯಾ, ಪ್ರತೀಕ್ಷಾ ಮತ್ತು ಸುಜ್ಞಾನ್ ಅವರನ್ನು ಸನ್ಮಾನಿಸಲಾಯಿತು.
ವಿಶುವಲ್ ಆರ್ಟ್ಸ್ ಪದವಿಯಲ್ಲಿ ದ್ವಿತೀಯ ರ‍್ಯಾಂಕ್ ಪಡೆದ ಶ್ರವಣ್ ಪೂಜಾರಿ, ಯುವವಾಹಿನಿ ಮಾಜಿ ಅಧ್ಯಕ್ಷ ಪ್ರಸ್ತುತ ಕೇಂದ್ರ ಸಮಿತಿ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ., ವಿವಿಧ ವಿಭಾಗದಲ್ಲಿ ಸಹಕರಿಸುತ್ತಿರುವ ಸಂತೋಷ್ ಪಣಪಿಲ, ಹರಿಪ್ರಸಾದ್ ಹೊಸಂಗಡಿ, ಶೋಭಾ ಸುರೇಶ್ ಹಾಗೂ ಸ್ವಾಮಿ ಪ್ರಸಾದ್ ಅವರನ್ನು ಅಭಿನಂದಿಸಲಾಯಿತು. ಸುಮಾರು 60 ಮಂದಿ ವಿದ್ಯಾರ್ಥಿವೇತನ ಅರ್ಜಿ ನೋಂದಣಿ ನಡೆಸಲಾಗಿದ್ದು ಅವರವರ ಮನೆಗಳಿಗೆ ತೆರಳಿ ನೆರವು ನೀಡುವುದಾಗಿ ಪ್ರಕಟಿಸಲಾಯಿತು.
ಬಿಲ್ಲವ ಸಂಘದ ಅಧ್ಯಕ್ಷ ಸುರೇಶ್ ಕೆ. ಪೂಜಾರಿ, ಅಶೋಕ್ ಬಿ. ಉಪಸ್ಥಿತರಿದ್ದರು. ಯುವ ಸ್ಪಂದನ ಯೋಜನೆಯ ಅಧ್ಯಕ್ಷ ನವಾನಂದ ಸ್ವಾಗತಿಸಿದರು. ನೂತನ ಸದಸ್ಯರ ಸೇರ್ಪಡೆ ನಡೆಯಿತು. ಹರೀಶ್ ಕಾಪಿಕಾಡ್ ಅತಿಥಿಯನ್ನು ಪರಿಚಯಿಸಿದರು. ಡಾ. ಯೋಗೀಶ್ ಕೈರೋಡಿ ಮತ್ತು ಪ್ರಭಾಕರ ಚಾಮುಂಡಿಬೆಟ್ಟ ನಿರೂಪಿಸಿ, ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ವಂದಿಸಿದರು.