
Ujire: ಎಸ್.ಡಿ.ಎಂ. ಕಾಲೇಜಿನಲ್ಲಿ ಪ್ರಶಿಕ್ಷಣ ಕಾರ್ಯಕ್ರಮ
ಶೈಕ್ಷಣಿಕ ಬೆಳವಣಿಗೆ, ವ್ಯಕ್ತಿತ್ವ ವಿಕಸನಕ್ಕೆ ಎಸ್.ಡಿ.ಎಂ. ವಿದ್ಯಾಸಂಸ್ಥೆಯಲ್ಲಿ ವಿಪುಲ ಅವಕಾಶ: ಡಾ. ಸತೀಶ್ಚಂದ್ರ ಎಸ್.
ಉಜಿರೆ: ಎಸ್.ಡಿ.ಎಂ. ವಿದ್ಯಾಸಂಸ್ಥೆ ಗುಣಮಟ್ಟದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ. ಸಾವಿರಾರು ವಿದ್ಯಾರ್ಥಿಗಳ ನಿರೀಕ್ಷೆಯನ್ನು ಹುಸಿಗೊಳಿಸದೆ ಅವರ ಶೈಕ್ಷಣಿಕ ಬೆಳವಣಿಗೆ, ಕೌಶಲ ಅಭಿವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತೆ ವಿಪುಲ ಅವಕಾಶಗಳನ್ನು ಸಂಸ್ಥೆ ನೀಡುತ್ತ ಬಂದಿದೆ ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಹೇಳಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಮೂರು ದಿನಗಳ ಪ್ರಶಿಕ್ಷಣ ಕಾರ್ಯಕ್ರಮವನ್ನು ಜೂ.24 ರಂದು ಉದ್ಘಾಟಿಸಿ ಅವರು ಮಾತನಾಡಿದರು.
ಪದವಿ ಹಂತದಲ್ಲಿ ಎದುರಾಗುವ ಸವಾಲುಗಳನ್ನು ಅವಕಾಶದಂತೆ ಸ್ವೀಕರಿಸಿ ಹೊಂದಿಕೊಳ್ಳುವ ಮನಃಸ್ಥಿತಿ ನಿಮ್ಮಲ್ಲಿ ಇರಲಿ. ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಯಶಸ್ವಿಯಾಗಿ ಎಂದು ಅವರು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಸ್.ಡಿ.ಎಂ ಸಂಸ್ಥೆ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುತ್ತಿದೆ. ಒಳ್ಳೆಯ ಮನೋಧರ್ಮ, ಜ್ಞಾನ ಹಾಗೂ ಕೌಶಲಗಳ ಜೊತೆ ವಿನಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ. ಗುರಿಯತ್ತ ಗಮನ ಹರಿಸಿ ಎಂದರು.
ಎನ್.ಎಸ್.ಎಸ್., ಎನ್.ಸಿ.ಸಿ., ಕಲಾ ಕೇಂದ್ರ, ಕ್ರೀಡಾಂಗಣ, ಗ್ರಂಥಾಲಯ ಸಹಿತ ಕಾಲೇಜಿನ ಚಟುವಟಿಕೆ ಹಾಗೂ ಸಾಧನೆಗಳ ಕಿರು ಪರಿಚಯ ಮಾಡಿಕೊಟ್ಟರು.
ಕಾಲೇಜಿನ ಆಡಳಿತ ಮತ್ತು ಪರೀಕ್ಷಾಂಗ ಕುಲಸಚಿವರು, ವಿವಿದ ವಿಭಾಗದ ಡೀನ್‌ಗಳು, ಉಪನ್ಯಾಸಕರು, 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಉಪ ಪ್ರಾಂಶುಪಾಲ ಪ್ರೊ. ಎಸ್.ಎನ್. ಕಾಕತ್ಕರ್ ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ನಿರೂಪಿಸಿದರು.