
Moodubidire: ನಾನು ಜಗತ್ತಿನ ಅತ್ಯ೦ತ ಉತ್ತಮ ವೃತ್ತಿಯಲ್ಲಿದ್ದೇನೆ: ಡಾ ಪಾರಿತೋಶ್ ಬಲ್ಲಾಳ್
ಮೂಡುಬಿದಿರೆ: “ವೈದ್ಯಕೀಯ ಬಹಳ ಪವಿತ್ರವಾದ ವೃತ್ತಿ. ಆ ವೃತ್ತಿಯ ಎಲ್ಲಾ ತ್ಯಾಗ ಮತ್ತು ಸವಾಲುಗಳ ನಡುವೆಯೂ ಅದು ಬಹಳ ಸ೦ತೃಪ್ತಿಯನ್ನು ನೀಡುವ ವೃತ್ತಿ. ಈ ನಿಟ್ಟಿನಲ್ಲಿ ನಾನು ಜಗತ್ತಿನ ಅತ್ಯ೦ತ ಉತ್ತಮ ವೃತ್ತಿಯಲ್ಲಿದ್ದೇನೆ” ಎ೦ದು ಬೆ೦ಗಳೂರಿನ ಶ್ರೀ ಜಯದೇವ ಇನ್ಸಿಟ್ಯೂಟ್ ಆಫ್ ಕಾರ್ಡಿಯೊವಾಸ್ಕುಲರ್ ಸಾಯನ್ಸಸ್ ಎ೦ಡ್ ರೀಸರ್ಚ್ನ ನ ಸಹಾಯಕ ಪ್ರಾಧ್ಯಾಪಕ ಡಾ ಪಾರಿತೋಶ್ ಬಲ್ಲಾಳ್ ಹೇಳಿದರು.
ಅವರು ಮೂಡುಬಿದಿರೆಯ ಎಕ್ಸಲೆ೦ಟ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನಡೆಸಿದ, “ನೀಟ್ ಪರೀಕ್ಷೆಯ ಯಶಸ್ಸಿನ ಸೂತ್ರ”ದ ಕುರಿತ ವಿಷಯದ ಮೇಲೆ ಸ೦ಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು.
ವೈದ್ಯನಾಗಲು ಪಡಬೇಕಾದ ತ್ಯಾಗ, ಶ್ರಮದ ಬಗ್ಗೆ ವಿದ್ಯಾರ್ಥಿಯೊಬ್ಬನು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಹೃದಯ ತಜ್ಞನಾಗಲು ಹದಿಮೂರು ವರ್ಷ ಬೇಕಾಗುತ್ತದೆ ಎ೦ದರು. “ಈ ಎರಡು ವರ್ಷಗಳಲ್ಲಿ ನೀವು ಎದುರಿಸುವ ಕಷ್ಟಗಳು ನಿಮ್ಮ ಭವಿಷ್ಯತ್ತಿಗೆ ನಿಮ್ಮನ್ನು ತಯಾರಿಸುತ್ತದೆ. ದೊಡ್ಡ ಕನಸನ್ನು ಕಾಣಲು ಹಿ೦ಜರಿಯಬೇಡಿ. ನಿಮ್ಮ ಕಲಿಕೆಯ ಶೈಲಿಯನ್ನು ಅರಿತುಕೊಳ್ಳಿ, ಉತ್ತಮ ನೆನಪಿಗಾಗಿ ನೀವು ಗಳಿಸಿದ ಜ್ಞಾನವನ್ನು ನಿಮ್ಮ ಪರಿಸರದ ಜೊತೆ ಹೊ೦ದಿಸಿ, ಅದರ ಜೊತೆಗೆ ವ್ಯಾಯಾಮವನ್ನು ಮಾಡಿ, ನಿಮ್ಮ ಕಲಿಕಾ ಸಾಮಾಗ್ರಿಗಳನ್ನು ಸರಿಯಾಗಿ ಜೋಡಿಸಿಕೊಳ್ಳಿ, ನಿಮ್ಮ ಗುರಿಯನ್ನು ದೃಶ್ಯೀಕರಿಸಿ, ಅನೇಕ ಪುನರಾವರ್ತನೆಗಳನ್ನು ಮಾಡಿ” ಎ೦ದರು.
ಏಕಾಗ್ರತೆಗೆ ಭಂಗ ತರುವ ಅನೇಕ ವಿಚಾರಗಳ ನಡುವೆ ನಮ್ಮ ಗುರಿಯಯೆಡೆಗೆ ಹೇಗೆ ಕೇ೦ದ್ರೀಕರಿಸುವುದು ಎಂದು ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಏಕಾಗ್ರತೆಯನ್ನು ಸಾಧಿಸುವುದು ಸವಾಲಾದರೂ ಅಸಾಧ್ಯವಲ್ಲ ಎ೦ದರು. “ನಿಮ್ಮ ಹೆತ್ತವರು ನಿಮಗೋಸ್ಕರ ಮಾಡಿರುವ ತ್ಯಾಗವನ್ನು ನೆನಸಿಕೊಳ್ಳಿ. ಅವರಿಂದ ಸ್ಪೂರ್ತಿ ಪಡೆಯಿರಿ. ಸಮಾನ ಗುರಿ ಇರುವ ಸಮಾನ ಮನಸ್ಕ ವಿದ್ಯಾರ್ಥಿಗಳೊಂದಿಗೆ ಬೆರೆಯಿರಿ. ಇದರಿ೦ದ ನಿಮ್ಮ ಗುರಿಯತ್ತ ಗಮನಹರಿಸಲು ಸಾಧ್ಯವಾಗುವುದು” ಎ೦ದರು.
ಹೆತ್ತವರಿ೦ದ ದೂರ ಇರುವುದರ ಮೂಲಕ ವಿದ್ಯಾರ್ಥಿಗಳು ಮಾಡುವ ತ್ಯಾಗವು ಮು೦ದೆ ಭವಿಷ್ಯದ ಸವಾಲುಗಳನ್ನು ಎದುರಿಸಲು ಸೂಕ್ತ ತಯಾರಿಯಾಗುತ್ತದೆ ಎ೦ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್ ಡಾ ಪಾರಿತೋಶ್ ಬಲ್ಲಾಳರನ್ನು ಸಂಸ್ಥೆಯ ವತಿಯಿಂದ ಗೌರವಿಸಿ, ಗುರಿಯನ್ನು ತಲುಪಲು ಅವರು ನೀಡಿದ ಸಲಹೆಯನ್ನು ಪಾಲಿಸುವ೦ತೆ ವಿದ್ಯಾರ್ಥಿಗಳಿಗೆ ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಅಡಳಿತ ನಿರ್ದೇಶಕ ಡಾ. ಬಿ.ಪಿ. ಸಂಪತ್ ಕುಮಾರ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.
ವಿನೋಲಿಯ ಪ್ರಿಯಾ೦ಕ ಕಾರ್ಯಕ್ರಮ ನಿರೂಪಿಸಿ, ವ೦ದಿಸಿದರು.