Moodubidire: ತಾಲೂಕು ಆಡಳಿತ ಸೌಧದಲ್ಲಿ ಕೆಂಪೇಗೌಡರ ಜಯಂತಿ ಆಚರಣೆ

Moodubidire: ತಾಲೂಕು ಆಡಳಿತ ಸೌಧದಲ್ಲಿ ಕೆಂಪೇಗೌಡರ ಜಯಂತಿ ಆಚರಣೆ


ಮೂಡುಬಿದಿರೆ: ಮೂಡುಬಿದಿರೆ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ತಾಲೂಕು ಆಡಳಿತ ಸೌಧದಲ್ಲಿ ಆಚರಿಸಲಾಯಿತು.

ಮಾಜಿ ಸಚಿವ ಕೆ. ಅಭಯಚಂದ್ರ ಅವರು ಕೆಂಪೇಗೌಡ ದೀಪ ಬೆಳಗಿ, ಭಾವಚಿತ್ರಕ್ಕೆ ಪುಷ್ಪಾರ್ಚಣೆಗೈದು ಮಾತನಾಡಿ, ಕೃಷಿ ಬದುಕನ್ನೇ ಬದುಕಾಗಿ ಕಟ್ಟಿಕೊಂಡ ಕೆಂಪೇಗೌಡರು ಅಭಿವೃದ್ಧಿಯಾಗಬೇಕೆಂಬ ಕನಸನ್ನು ಕಂಡು ಆನಂತರದ ದಿನಗಳಲ್ಲಿ ರಾಜಕರಣಿಗಳು ತೆಗೆದುಕೊಂಡ ನಿರ್ಧಾರಗಳಿಂದ ಇಂದು ಬೆಂಗಳೂರು ಸಿಲಿಕಾನ್ ಸಿಟಿಯಾಗಲು ಕಾರಣವಾಯಿತು ಎಂದು ಹೇಳಿದರು.

ಭಾರತ ದೇಶದಲ್ಲೇ ಅತೀ ಹೆಚ್ಚು ಐಟಿ ಉದ್ದಿಮೆಗಳಿದ್ದರೆ ಅದು ಬೆಂಗಳೂರಿನಲ್ಲಿ. ಇದರಿಂದಾಗಿ ವಿದ್ಯಾರ್ಥಿಗಳು ತಾವು ಉದ್ಯಮಪತಿಗಳಾಗಬೇಕು ತಮಗೂ ಉದ್ಯೋಗ ಸಿಗಬೇಕು ಎಂಬ ಚಿಂತನೆಯನ್ನು ನಡೆಸಿದ್ದು ಇಂದು ಅದಕ್ಕೆ ಪೂರಕವಾಗಿ ವಿದ್ಯಾ ಸಂಸ್ಥೆಗಳು ಬೆಳೆಯಲು ಪ್ರಾರಂಭವಾಯಿತು ಎಂದರು.

ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕಗಳನ್ನು ಗಳಿಸಿರುವ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ಕೆಂಪೇಗೌಡರ ಜಯಂತಿಯ ಅಂಗವಾಗಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾಗಿರುವ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ ಅವರು ಕೆಂಪೇಗೌಡರ ಬಗ್ಗೆ ಮಾತನಾಡಿ, ಶಿಕ್ಷಣದಲ್ಲಿ, ತಂತ್ರಜ್ಞಾನದಲ್ಲಿ ಮತ್ತು ಯೋಚನಾಕ್ರಮದಲ್ಲಿ ನಾವು ಮುಂದೆ ಬಂದಿದ್ದರೆ ಅದು ಕೆಂಪೇಗೌಡರಿಂದ. ಹಿಂದೆ ದ.ಕ. ಜಿಲ್ಲೆಯವರು ಬದುಕು ಕಟ್ಟಿಕೊಳ್ಳಲು ಮುಂಬಯಿಯತ್ತ ವಲಸೆ ಹೋಗುತ್ತಿದ್ದರು. ಆದರೆ ಇಂದಿನ ತಲೆಮಾರು ಉನ್ನತ ಶಿಕ್ಷಣ, ಐಟಿ ಶಿಕ್ಷಣ, ವ್ಯವಹಾರಕ್ಕಾಗಿ ಬೆಂಗಳೂರಿನತ್ತ ವಲಸೆ ಹೋಗುತ್ತಿದ್ದಾರೆ. ಈಗ ಇಲ್ಲಿನ ಜನರಿಗೆ ಅದು ಅನ್ನದ ಬಟ್ಟಲಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ವಲಸೆಗೂ ಚರಿತ್ರೆಯಿದೆ, ವರ್ತಮಾನವಿದೆ ಅದಕ್ಕೊಂದು ಭವಿಷ್ಯವಿದೆ ಇಂತಹ ಬೆಂಗಳೂರಿಗೆ ಜನರು ಹೋಗುವುದಕ್ಕೆ ಶಕ್ತಿಯಾಗಿ ನಿಂತವರು ಕೆಂಪೇಗೌಡರು ಎಂದರು.

‘ಬಿ’ ಗ್ರೇಡ್ ತಹಶೀಲ್ದಾರ್ ಪುಟ್ಟರಾಜು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಬಿ., ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ, ಉಪತಹಶೀಲ್ದಾರ್ ತಿಲಕ್, ಬಾಲಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಉಪತಹಾಶೀಲ್ದಾರ್ ರಾಮ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article