Moodubidire: ಸ್ಕೌಟ್ಸ್ ಗೈಡ್ಸ್ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Moodubidire: ಸ್ಕೌಟ್ಸ್ ಗೈಡ್ಸ್ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ


ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ, ದ.ಕ ಜಿಲ್ಲಾ ಸಂಸ್ಥೆ ಮೂಡುಬಿದಿರೆ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಹಯೋಗದಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿರುವ ಸ್ಕೌಟ್ಸ್ ಗೈಡ್ಸ್, ರೋರ್ಸ್ ಮತ್ತು ರೇಂಜರ‍್ಸ್‌ಗಳಿಗೆ  ಸೋಮವಾರ ಅಭಿನಂದನಾ ಕಾರ್ಯಕ್ರಮ ನಡೆಯಿತು.

ಭಾರತ ಸ್ಕೌಟ್ಸ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ಕೌಟ್ಸ್ ಗೈಡ್ಸ್ ರಾಜಕೀಯೇತರ ಶೈಕ್ಷಣಿಕ ಆಂದೋಲನವಾಗಿದ್ದು ಮಕ್ಕಳಲ್ಲಿ ಬೌದ್ಧಿಕ ಹಾಗೂ ಸಾಮಾಜಿಕ ಜವಬ್ದಾರಿಗಳನ್ನು ಹೆಚ್ಚಿಸುತ್ತದೆ. ಇಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಮಕ್ಕಳು ಕೆಟ್ಟ ಚಟಗಳಿಂದ ದೂರ ಇರುತ್ತಾರೆ. ಹೆತ್ತವರು ಸ್ಕೌಟ್ಸ್ ಗೈಡ್ಸ್‌ನ ಮಹತ್ವವನ್ನು ಅರಿತು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಸ್ಕೌಟ್ಸ್ ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಡಾ.ಎಂ. ಮೋಹನ ಅಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯೆಯ ಜತೆಗೆ ಸ್ಕೌಟ್ಸ್ ಗೈಡ್ಸ್ ಮೂಲಕ ಒಳ್ಳೆಯ ಮನಸ್ಸು ಕಟ್ಟುವ ಕೆಲಸ ಆಗುತ್ತಿದೆ. ಶಿಸ್ತು, ದೇಶಪ್ರೇಮ, ನಾಯಕತ್ವದ ಗುಣ, ಸೇವಾ ಮನೋಭಾವವನ್ನು ಮೂಡಿಸಲು ಸ್ಕೌಟ್ಸ್ ಗೈಡ್ಸ್ ಚಟುವಟಿಕೆ ತುಂಬಾ ಪ್ರಯೋಜನವಾಗಲಿದೆ. ಜಾತಿ, ಧರ್ಮಕ್ಕೆ ಸೀಮಿತವಾಗದೆ ಸೌಹಾರ್ದತೆಯನ್ನು ಮೂಡಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಎದುರಾಗಬಲ್ಲ ಶೈಕ್ಷಣಿಕ ಸವಾಲುಗಳನ್ನು ಎದುರಿಸಲು ಸ್ಕೌಟ್ಸ್ ಗೈಡ್ಸ್ ನೆರವಾಗಲಿದೆ ಎಂದರು. 

ಸನ್ಮಾನ: 

ಎಸ್‌ಎಸ್‌ಎಲ್‌ಸಿಯಲ್ಲಿ 5ನೇ ರ‍್ಯಾಂಕ್ ಪಡೆದ ಭಾರ್ಗವಿ ಮಯ್ಯ, ದ್ವಿತೀಯ ಪಿಯುಸಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ಸಾನ್ವಿ ರಾವ್, ಲೋಕಸಭಾ ಚುನಾವಣೆಯಲ್ಲಿ ಸರಕಾರದ ಪ್ರತಿನಿಧಿಯಾಗಿದ್ದ ಸನ್ನಿದ್ಧಿ, ವಿಜ್ಞಾನ ಮಾದರಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪಡೆದ ಶಾಸ್ತ ನಾಯಕ್, ಎಂಎಸ್ಸಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದ ಚಂದ್ರಾಕ್ಷ ಇವರನ್ನು ಸನ್ಮಾನಿಸಲಾಯಿತು.  

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್‌ನ ಉಪಾಧ್ಯಕ್ಷ ಶ್ರೀಪತಿ ಭಟ್, ಶಾಲಾ ಶಿಕ್ಷಣ ಇಲಾಖೆ ದ.ಕ. ಇದರ ಉಪನಿರ್ದೇಶಕ ವೆಂಕಟೇಶ್ ಸುಬ್ರಾಯ ಪಟಗರ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ, ಸ್ಕೌಟ್ಸ್ ಗೈಡ್ಸ್‌ನ ಪ್ರಮುಖರಾದ ವಿಮಲ ರಂಗಯ್ಯ, ಜಯವಂತಿ ಸೋನ್ಸ್, ಭಾರತಿ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. 

ವಸಂತ ದೇವಾಡಿಗ ಸ್ವಾಗತಿಸಿದರು. ನವೀನ್ ಅಂಬೂರಿ ನಿರೂಪಿಸಿ, ಪ್ರಭಾಕರ್ ಭಟ್ ವಂದಿಸಿದರು.



Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article