
Putturu: ನೀಟ್ ಹಗರಣ ದೊಡ್ಡ ದುರಂತ: ಅಶೋಕ್ ರೈ
ಪುತ್ತೂರು: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಹೆಜ್ಜೆ ಇಡುವಲ್ಲಿ ನಡೆಯುವ ನೀಟ್ ಪರೀಕ್ಷೆಯಲ್ಲೇ ಹಗರಣ ನಡೆದಿದೆ ಎಂದಾದರೆ ಇದು ವಿದ್ಯಾರ್ಥಿ ಹಾಗೂ ಪೋಷಕರ ಪಾಲಿಗೆ ಬಹು ದೊಡ್ಡ ದುರಂತವಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ನೀಟ್, ಕೆಸಿಇಟಿ ಮತ್ತು ಜೆಇಇ ಯಲ್ಲಿ ಅತ್ಯಧಿಕ ಅಂಪಡೆದ ವಿದ್ಯಾರ್ಥಿಗಳಿಗೆ ತಮ್ಮ ಕಚೇರಿಯಲ್ಲಿ ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ಗೌರವಿಸಿ ಸನ್ಮಾನ ಮಾಡಿದರು.
ನಮ್ಮ ಕ್ಷೇತ್ರದಲ್ಲಿ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ ಎಂಬುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಾವು ಖಂಡಿತವಾಗಿಯೂ ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕಾಗಿದ್ದು ನಮ್ಮ ಕರ್ತವ್ಯವಾಗಿದೆ. ನಮ್ಮ ಅನೇಕ ವಿದ್ಯಾರ್ಥಿಗಳು ನೀಟ್ ನಲ್ಲಿಯೂ ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ ಎಂದು ಹೇಳಿದರು.
ಟ್ರಸ್ಟ್‌ನ ಗೌರವ ಸಲಹೆಗಾರರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಕಣ್ಣಿಗೆ ಕಾಣುವ ಅಭಿವೃದ್ದಿಗಳು ಬೇರೆಯೇ ಇರುತ್ತದೆ, ಪ್ರತಿಭಾವಂತ ವಿದ್ಯಾರ್ಥಿಗಳು ಸೇರಿದಂತೆ ಕಣ್ಣಿಗೆ ಕಾಣಿಸಿದ ಅನೇಕ ಅಭಿವೃದ್ದಿ ಕೆಲಸಗಳನ್ನು ಶಾಸಕರು ಸದಾ ಮಾಡುತ್ತಿದ್ದಾರೆ. ರಸ್ತೆ, ನೀರು, ಮೋರಿ ಮಾಡುವುದು ಮಾತ್ರ ಅಭಿವೃದ್ದಿ ಕೆಲಸವಲ್ಲ. ಬಡವರ ಕಣ್ಣೀರೊರೆಸುವುದು ಕೂಡಾ ಅಭಿವೃದ್ದಿಯ ಒಂದು ಭಾಗವಾಗಿದೆ. ಜನರಿಂದ ಆಶೀರ್ವಾದ ಪಡೆಯುತ್ತಿರುವ ಶಾಸಕರು ಪುತ್ತೂರಿನಲ್ಲಿ ಅನೇಕ ಅವಧಿಗೆ ಸಾಸಕರಾಗಿ ಮೆರೆಯಲಿ ಎಂದು ಶುಭ ಹಾರೈಸಿದರು.
ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಟ್ರಸ್ಟ್‌ನ ಪ್ರಮುಖರಾದ ನಿಹಾಲ್ ಪಿ ಶೆಟ್ಟಿ ಮಾತನಾಡಿ ಯುವಕರನ್ನು ವಿಷ ಬೀಜ ಬಿತ್ತುವ ಕೆಲಸಕ್ಕೆ ಬಳಕೆ ಮಾಡುವ ಬದಲು ಅವರಿಗೆ ವಿದ್ಯೆ ಮತ್ತು ಉದ್ಯೋಗವನ್ನು ಕೊಡಿಸುವ ಕೆಲಸವನ್ನು ನಾವು ಪ್ರತೀಯೊಬ್ಬರೂ ಮಾಡಬೇಕು. ಪುತ್ತೂರು ವಿಧಾನಸಭಾ ಕ್ಷೇತ್ರದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸಬೇಕು ಅವರು ಕುಟುಂಬಕ್ಕೆ ಆಸರೆಯಾಗಬೇಕು ಎಂಬ ಉದ್ದೇಶದಿಂದ ಶಾಸಕರು ಉದ್ಯೋಗ ಮೇಳವನ್ನು ಆಯೋಜನೆ ಮಾಡುತ್ತಿದ್ದಾರೆ, ಅನೇಕ ಉದ್ಯಮವನ್ನು ಪುತ್ತೂರಿಗೆ ತರುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಮುರಳೀಧರ್ ರೈ ಮಟಂತಬೆಟ್ಟು, ಕೃಷ್ಣಪ್ರಸಾದ್ ಆಳ್ವ, ಪಂಜಿಗುಡ್ಡೆ ಈಶ್ವರಭಟ್ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು. ಟ್ರಸ್ಟ್ ಪ್ರಮುಖರಾದ ಯೋಗಿಶ್ ಸಾಮಾನಿ ವಂದಿಸಿದರು. ಸಿಬಂದಿಗಳಾದ ಲಿಂಗಪ್ಪ ಮತ್ತು ರಚನಾ ಕಾರ್ಯಕ್ರಮ ನಿರೂಪಿಸಿದರು.