
Putturu: ಪಡಿತರ ಅಕ್ಕಿಯಲ್ಲಿ ಹುಳು-ಮಹಿಳಾ ಸಹಕಾರಿ ಸಂಸ್ಥೆಯಿಂದ ಕಳಪೆ ಅಕ್ಕಿ ವಿತರಣೆ: ಆರೋಪ
ಪುತ್ತೂರು: ಪಡಿತರ ವಿತರಣೆ ಮಾಡುವ ಪುತ್ತೂರಿನ ಮಹಿಳಾ ಸಹಕಾರಿ ಸಂಘ ಹುಳುಗಳಾಗಿರುವ ಅಕ್ಕಿಯನ್ನು ಬಡ ಜನತೆಗೆ ನೀಡಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ. ಪುತ್ತೂರಿನ ಮಹಿಳಾ ಸೊಸೈಟಿಯಲ್ಲಿ ಸರ್ಕಾರದಿಂದ ನೀಡಲಾಗುತ್ತಿರುವ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿದ್ದು, ಇದರಲ್ಲಿ ಹುಳು ತುಂಬಿದ್ದರೂ ಇದೇ ಅಕ್ಕಿಯನ್ನು ಜನರಿಗೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರಶ್ನೆ ಮಾಡಿದರೂ ಇದೇ ಅಕ್ಕಿ ಇರುವುದು ಬೇಕಾದರೆ ಕೊಂಡುಹೋಗಿ ಎಂಬ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಪಡಿತರ ಚೀಟಿದಾರರು ಆರೋಪಿಸಿದ್ದಾರೆ.
ಇಲ್ಲಿ ನೀಡಲಾಗುತ್ತಿರುವ ಪಡಿತರ ಅಕ್ಕಿಯ ಬಣ್ಣವೇ ಬದಲಾವಣೆಯಾಗಿದೆ. ಒಂದು ರೀತಿಯ ಕಮಟು ವಾಸನೆ ಬರುತ್ತಿದೆ. ಹುಳುಗಳಿಂದ ತುಂಬಿದೆ. ಇದೇ ಅಕ್ಕಿಯನ್ನು ನಾವು ಒಯ್ಯಬೇಕಾಗಿದೆ. ಈ ಅಕ್ಕಿಯಲ್ಲಿ ಮಾಡಿದ ಅನ್ನವನ್ನು ತಿನ್ನುವ ಹಾಗಿಲ್ಲ. ಆದರೆ ಜವಾಬ್ದಾರಿ ವಹಿಸಬೇಕಾಗಿದ್ದ ಮಹಿಳಾ ಸಹಕಾರಿ ಸೊಸೈಟಿ ಸಿಬಂದಿಗಳು ಈ ಬಗ್ಗೆ ಯಾವುದೇ ಸ್ಪಂಧನೆ ಮಾಡುತ್ತಿಲ್ಲ. ಈ ಕಳಪೆ ಅಕ್ಕಿಯನ್ನು ನೀಡುವ ಮೂಲಕ ಜನತೆಯ ಆರೋಗ್ಯಕ್ಕೆ ಧಕ್ಕೆ ತರುವ ಪ್ರಯತ್ನ ಮಹಿಳಾ ಸೊಸೈಟಿಯಿಂದ ನಡೆಯುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಬಾಲಚಂದ್ರ ಸೊರಕೆ ಆರೋಪ ಮಾಡಿದ್ದಾರೆ.
ಅಕ್ರಮ ಮಾರಾಟ ಜಾಲ..:
ಈ ಮಹಿಳಾ ಸೊಸೈಟಿಯಿಂದ ಪಡಿತರ ವಿತರಣೆ ಆರಂಭಗೊಂಡ ದಿನದಿಂದ ವಿತರಣೆ ಕೊನೆಗೊಳ್ಳುವ ತನಕದ ದಿನದ ತನಕ ಅಟೋರಿಕ್ಷಾ ವೊಂದರಲ್ಲಿ ಅಕ್ಕಿ ಮಾರಾಟ ದಂಧೆ ನಡೆಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಪ್ರತೀ ನಿತ್ಯವೂ ಈ ರಿಕ್ಷಾದಲ್ಲಿ ಅಕ್ಕಿ ಒಯ್ಯಲಾಗುತ್ತಿದೆ. ಇದೊಂದು ಅಕ್ರಮ ಮಾರಾಟಜಾಲವಾಗಿದೆ ಎಂಬ ಶಂಕೆ ಸಾರ್ವಜನಿಕರದ್ದಾಗಿದೆ.
ಈ ಬಗ್ಗೆ ತಕ್ಷಣ ಆಹಾರ ಇಲಾಖೆ ಕ್ರಮ ಕೈಗೊಳ್ಳಬೇಕು. ಅಕ್ಕಿಯಲ್ಲಿ ಹುಳು ತುಂಬಿದ್ದರೆ ಅದನ್ನು ಜನತೆಗೆ ನೀಡದೆ ವಾಪಾಸು ಮಾಡಬೇಕಿತ್ತು. ಆದರೆ ಮಹಿಳಾ ಸಹಕಾರಿ ಸಂಸ್ಥೆ ಜನತೆಯೆ ಆನಾರೋಗ್ಯಕರವಾದ ಅಕ್ಕಿಯನ್ನು ವಿತರಿಸುವ ಮೂಲಕ ಜನತೆಯ ಆರೋಗ್ಯ ಹಾಳು ಮಾಡುವ ಕೆಲಸ ಮಾಡುತ್ತಿದೆ. ಈ ಸಂಸ್ಥೆಯ ವಿರುದ್ಧವೂ ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.