
Ujire: ಆತ್ಮ ನಿರ್ಭರ ಭಾರತ: ಡಾ. ರಂಗಸ್ವಾಮಿ
ಉಜಿರೆ: ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ‘ಆತ್ಮ ನಿರ್ಭರ ಭಾರತ’ ಎಂಬ ವಿಷಯದ ಕುರಿತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ರಿಜಿಸ್ಟ್ರಾರ್ ಡಾ. ರಂಗಸ್ವಾಮಿ ಅವರು ತಾಂತ್ರಿಕ ಉಪನ್ಯಾಸ ನೀಡಿದರು.
ಡಾ. ರಂಗಸ್ವಾಮಿ ಅವರು 1947 ರಿಂದ ಈ ತನಕ ಭಾರತವು ಕೃಷಿ ಹಾಗೂ ಆಹಾರಧಾನ್ಯಗಳ ಉತ್ಪಾದನೆ, ಬಾಹ್ಯಾಕಾಶ ಕ್ಷೇತ್ರ, ವಿಜ್ಞಾನ-ತಂತ್ರಜ್ಞಾನ, ನೀರಾವರಿ-ಅಣೆಕಟ್ಟು, ಸಂಪರ್ಕ-ಸಂವಹನ ಕ್ಷೇತ್ರದಲ್ಲಿ ಕಂಡುಕೊಂಡ ಕ್ಷಿಪ್ರ ಪ್ರಗತಿಯನ್ನು ವಿವರಿಸುತ್ತಾ ಭಾರತವು ಇಂದು ಆತ್ಮ ನಿರ್ಭರತೆಯೊಂದಿಗೆ ಮುನ್ನಡೆಯುತ್ತಿದ್ದು ಜಗತ್ತಿನಲ್ಲಿ ವಿಶೇಷವಾಗಿ ಗುರುತಿಸಲ್ಪಡುತ್ತಿದೆ ಎಂದರು.
ಈ ನಿಟ್ಟಿನಲ್ಲಿ ಅನನ್ಯ ಕೊಡುಗೆ ನೀಡಿದ ವಿಜ್ಞಾನಿಗಳನ್ನು, ತಂತ್ರಜ್ಞರನ್ನು, ರಾಜಕೀಯ ಮುತ್ಸದಿಗಳು, ಉದ್ಯಮಿಗಳನ್ನು ನೆನಪಿಸಿಕೊಂಡು, ಇವರುಗಳು ವಿದ್ಯಾರ್ಥಿ ಹಾಗೂ ತರುಣ ಇಂಜಿನಿಯರುಗಳಿಗೆ ಆದರ್ಶವಾಗಿರಲೆಂದು ಆಶಿಸಿದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಐಟಿ ಮತ್ತು ಹಾಸ್ಟೆಲ್‌ನ ಕಾರ್ಯ ನಿರ್ವಹಣಾ ಅಧಿಕಾರಿ ಪೂರಣ್ ವರ್ಮಾ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಸಮಾಜಕ್ಕೆ ಉಪಯೋಗವಾಗುವಂತಹ ಪ್ರಾಜೆಕ್ಟ್ ಹಾಗೂ ಆಪ್‌ಗಳನ್ನು ಅಭಿವೃದ್ಧಿಗೊಳಿಸುವಂತೆ ಕರೆ ನೀಡಿದರು.
ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರಾದ್ಯಾಪಕರು ಭಾಗವಹಿಸಿದರು.