Udupi: ಸಚಿವೆ ಹೆಬ್ಬಾಳ್ಕರ್ ವಿರುದ್ಧ ಗೋ ಬ್ಯಾಕ್ ಅಭಿಯಾನ
ಉಡುಪಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವೆ ಹಾಗೂ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂತ್ರಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಾಂಗ್ರೆಸ್ ಗೋ ಬ್ಯಾಕ್ ಅಭಿಯಾನ ಆರಂಭಿಸಿದೆ.
ಚುನಾವಣೆ ಘೋಷಣೆಯಾಗುತ್ತಲೇ ಉಡುಪಿ ಜಿಲ್ಲೆಯನ್ನು ನಿರ್ಲಕ್ಷಿಸಿದ ಹೆಬ್ಬಾಳ್ಕರ್ ಅದಕ್ಕೆ ಕಾರಣ ಪುತ್ರ ವ್ಯಾಮೋಹ ಎಂದು ಕಾಂಗ್ರೆಸ್ ಕಾರ‍್ಯಕರ್ತರು ವ್ಯಾಖ್ಯಾನಿಸಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿಲ್ಲದಿದ್ದರೂ ಕಾಂಗ್ರೆಸ್ ಸರ್ಕಾರ ಉಡುಪಿಯವರಲ್ಲದ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವೆಯನ್ನಾಗಿ ನೇಮಿಸಿದ್ದಾಗ ಕಾಂಗ್ರೆಸ್ ಬಲವರ್ಧನೆಯೂ ಸೇರಿದಂತೆ ಜಿಲ್ಲೆಯಲ್ಲಿ ಅಭಿವೃದ್ಧಿಯನ್ನು ನಿರೀಕ್ಷಿಸಿದ್ದ ಕಾಂಗ್ರೆಸ್ ಕಾರ‍್ಯಕರ್ತರಿಗೆ ನಿರಾಸೆಯಾಗಿದೆ.
ಉಸ್ತುವಾರಿ ವಹಿಸಿಕೊಂಡ ಆರಂಭದಲ್ಲಿ ಪ್ರತೀ 15 ದಿನಕ್ಕೊಮ್ಮೆ ಜಿಲ್ಲೆಗೆ ಭೇಟಿ ನೀಡುವುದಾಗಿ ಹೇಳಿದ್ದ ಸಚಿವೆ ಬರಬರುತ್ತಾ ಕಾಣೆಯಾಗಿದ್ದರು. ಚುನಾವಣೆ ಘೋಷಣೆಯಾದ ಬಳಿಕವಂತೂ ಜಿಲ್ಲೆಯತ್ತ ಮುಖ ಮಾಡಿಲ್ಲ. ಅದಕ್ಕೆ ಕಾರಣ ಬೆಳಗಾವಿ ಕ್ಷೇತ್ರದಲ್ಲಿ ತನ್ನ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅಭ್ಯರ್ಥಿಯಾಗಿರುವುದೇ ಕಾರಣ. ಅವರ ಪ್ರಚಾರಕ್ಕಾಗಿ ಉಡುಪಿಯನ್ನು ಕಡೆಗಣಿಸಿದರು. ಜಿಲ್ಲೆಯಲ್ಲಿ ನೆಲಕಚ್ಚಿರುವ ಕಾಂಗ್ರೆಸ್‌ಗೆ ಪುನಶ್ಚೇತನ ನೀಡಬೇಕಾದ ಉಸ್ತುವಾರಿ ಸಚಿವೆ ತನ್ನ ಜವಾಬ್ದಾರಿ ಮರೆತರು ಎಂದು ಆಕ್ರೋಶಗೊಂಡ ಕಾಂಗ್ರೆಸ್ ಕಾರ‍್ಯಕರ್ತರು ಸಾಮಾಜಿಕ ಜಾಲತಾಣ ಮೂಲಕ ಗೋ ಬ್ಯಾಕ್ ಎನ್ನುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಎರಡೂವರೆ ಲಕ್ಷ ಮತಗಳ ಅಂತರದಿಂದ ಸೋತಿದ್ದು, ಆ ಸಿಟ್ಟನ್ನು ಕೈ ಕಾರ್ಯಕರ್ತರು ಗೋ ಬ್ಯಾಕ್ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಹೊರಹಾಕಿದ್ದಾರೆ. ಮಾತ್ರವಲ್ಲ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸುವಂತೆಯೂ ಒತ್ತಾಯ ಮಾಡಿದ್ದಾರೆ.