Udupi: ನೀರಿಗಾಗಿ ಯುದ್ಧ ನಿಲ್ಲಿಸಲು ಪರಿಸರ ಸಂರಕ್ಷಣೆ: ಬಸ್ರೂರು ರಾಜೀವ್ ಶೆಟ್ಟಿ
ಉಡುಪಿ: ಮುಂದೊಂದು ದಿನ ಜಗತ್ತಿನಲ್ಲಿ ನೀರಿಗಾಗಿ ಯುದ್ಧ ನಡೆಯುವ ಸಂಭವವಿದೆ ಎಂದು ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ. ಅಂಥ ವಿಪ್ಲವಗಳನ್ನು ತಪ್ಪಿಸಲು ಪರಿಸರ ಸಂರಕ್ಷಣೆ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಸಂದರ್ಭದಲ್ಲಿ ನಾವಿದ್ದೇವೆ ಎಂದು ಜಿಲ್ಲಾ ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹೇಳಿದರು.
ಜಿಲ್ಲಾ ರೆಡ್‌ಕ್ರಾಸ್ ವತಿಯಿಂದ ಡಾ. ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್‌ಎಸ್‌ಎಸ್ ಮತ್ತು ಯೂತ್ ರೆಡ್‌ಕ್ರಾಸ್ ಘಟಕಗಳು ಕಾಲೇಜಿನ ಸಸ್ಯಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಹುಟ್ಟುಹಬ್ಬದಂದು ವರ್ಷಕ್ಕೊಂದು ಗಿಡ ನೆಡುವಂತೆ ಕರೆ ನೀಡಿದರು.
ಕಾಲೇಜು ಪ್ರಾಂಶುಪಾಲ ಡಾ. ಭಾಸ್ಕರ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ರೆಡ್‌ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಮುಖ್ಯ ಅತಿಥಿಯಾಗಿದ್ದರು. ಯೂತ್ ರೆಡ್‌ಕ್ರಾಸ್ ಸಂಯೋಜಕಿ ಡಾ. ವಿದ್ಯಾ ಎಂ.ಎಸ್, ಎನ್.ಎಸ್.ಎಸ್ ಅಧಿಕಾರಿ ವಿದ್ಯಾ ಡಿ. ಇದ್ದರು.
ಖ್ಯಾತ ಕೃಷಿ ತಜ್ಞ ಜೋಸೆಫ್ ಲೋಬೊ ಪರಿಸರ ರಕ್ಷಣೆಯ ಬಗ್ಗೆ ಉಪನ್ಯಾಸ ನೀಡಿದರು. ಪರಿಸರ ರಕ್ಷಣೆಯ ಕುರಿತಾಗಿ ಸಸ್ಯ ಶಾಸ್ತ್ರ ವಿಭಾಗ ಏರ್ಪಡಿಸಿದ ಸ್ವರ್ಧೆಗಳ ಬಹುಮಾನ ವಿತರಿಸಲಾಯಿತು.
ಎನ್‌ಎಸ್‌ಎಸ್ ಅಧಿಕಾರಿ ಡಾ. ನಿಕೇತನ ಸ್ವಾಗತಿಸಿದರು. ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಮಹಾದೇವಸ್ವಾಮಿ ಪ್ರಸ್ತಾವನೆಗೈದರು. ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಕೇಶವಮೂರ್ತಿ ಎಂ. ವಿ. ವಂದಿಸಿದರು.