Udupi: ಸ್ವಾರ್ಥ ನಾಯಕರಿಂದ ದಲಿತ ಚಳುವಳಿ ವಿಘಟನೆ: ಜಯನ್ ಮಲ್ಪೆ
ಉಡುಪಿ: ದಲಿತ ಚಳುವಳಿ ಈ ನೆಲದ ಆತ್ಮವಾಗಿತ್ತು. ಅದರ ಹಿಂದೆ ಉರಿಯುವ ಪಂಜಿನಂಥ ಸೇನಾಪಡೆ ಇತ್ತು. ಆಳುವ ವರ್ಗದ ಪಿತೂರಿಗಳಿಗೆ, ನಾಯಕರ ಸ್ವಾರ್ಥಕ್ಕೆ ದಲಿತ ಚಳುವಳಿ ವಿಘಟನೆಗೊಂಡಿರುವುದು ನೋವಿನ ಸಂಗತಿ. ಸ್ವಾರ್ಥ ನಾಯಕರಿಂದಲೇ ದಲಿತ ಚಳುವಳಿ ವಿಘಟನೆಯಾಗಿದೆ ಎಂದು ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದರು.
ಭಾನುವಾರ ಮಲ್ಪೆ ಸರಸ್ವತಿ ಬಯಲು ರಂಗ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಘಟಕ ಆಯೋಜಿಸಿದ ದಲಿತ ಚಳುವಳಿಯ ಪಿತಾಮಹ ಪ್ರೊ. ಬಿ. ಕೃಷ್ಣಪ್ಪ ಅವರ ೮೮ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಹೋರಾಟ ಎನ್ನುವುದು ಬದಲಾವಣೆ ಬಯಸುವ, ತ್ಯಾಗ ಬಲಿದಾನಗಳಿಗೆ ಸಿದ್ಧರಾಗಿರುವವ ಆಡುವ ಭಾಷೆಯಾಗಿತ್ತೇ ವಿನಾಃ ಇಂದಿನಂತೆ ಜೀವನೋಪಾಯಕ್ಕಾಗಿ ಹೊಟ್ಟೆ ಹೊರೆಯುವವರ ದಂಧೆಯಾಗಿರಲಿಲ್ಲ. ಕ್ರಾಂತಿ ಬಯಸುತ್ತಿರುವ ಈ ಕಾಲಘಟ್ಟದಲ್ಲಿ ದಲಿತ ಚಳುವಳಿಗೆ ದೇಹವೂ ಇಲ್ಲ, ಬಾಯಿಯೂ ಇಲ್ಲ, ಉರಿಯುವ ಪಂಜಿನಂಥ ಕಾರ್ಯಕರ್ತರೂ ಇಲ್ಲ ಎಂದು ಜಯನ್ ವಿಷಾದಿಸಿದರು.
ಪ್ರಗತಿಪರ ಚಿಂತಕ ಸಂಜೀವ ಬಳ್ಕೂರು, ಶೋಷಿತರ ಕಣ್ಮಣಿಯಾಗಿದ್ದ ಪ್ರೊ.ಬಿ.ಕೆ ನಾಡಿನಲ್ಲಿ ದಲಿತ ಸಂಘರ್ಷ ಸಮಿತಿ ಕಟ್ಟಿ ಪ್ರಜ್ಞಾವಂತಿಕೆ ಬೆಳೆಸಿದವರು ಎಂದರು.
ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ದಲಿತ ಮುಖಂಡರಾದ ಹರೀಶ್ ಸಾಲ್ಯಾನ್, ಸಂತೋಷ್ ಕಪ್ಪೆಟ್ಟು, ಸಾಧು ಚಿಟ್ಪಾಡಿ, ಪ್ರಸಾದ್ ಮಲ್ಪೆ, ಸತೀಶ್ ಕಪ್ಪೆಟ್ಟು, ಭಗವಾನ್ ಮಲ್ಪೆ, ಗುಣವಂತ ತೊಟ್ಟಂ, ವಿನಯ ಬಲರಾಮನಗರ, ಈಶ್ವರ್ ಗದಗ್, ಯೋಗೀಶ್ ಮಲ್ಪೆ, ಅಚ್ಯುತ ಕದ್ಕೆ, ವಿಶ್ವನಾಥ ಕದ್ಕೆ, ಶಶಿಕಲಾ ತೊಟ್ಟಂ, ಸಂಕಿ ತೊಟ್ಟಂ, ಕಲಾವತಿ ತೊಟ್ಟಂ, ಅರ್ಚನ ಮೊದಲಾದವರದ್ದರು.
ಸುಕೇಶ್ ಪುತ್ತೂರು ಸ್ವಾಗತಿಸಿ, ನವೀನ್ ಬನ್ನಂಜೆ ವಂದಿಸಿದರು.