Udupi: ಸೋಲಿನಿಂದ ಪಲಾಯನವಾಗುವ ಪ್ರಶ್ನೆ ಇಲ್ಲ: ಕೆ. ರಘುಪತಿ ಭಟ್
Sunday, June 9, 2024
ಉಡುಪಿ: ಪದೇ ಪದೇ ಪಕ್ಷೇತರನಾಗಿ ನಿಲ್ಲುವ ಚಟ ಇಲ್ಲ. ಈ ಮಟ್ಟಿನ ಸೋಲು ನಿರೀಕ್ಷೆ ಮಾಡಿರಲಿಲ್ಲ. ಸೋಲಿನಿಂದ ಓಡಿ ಹೋಗುವ ಪ್ರಶ್ನೆಯೇ ಇಲ್ಲ. ರಾಜಕೀಯ, ಸಾಮಾಜಿಕ ಕಾರ್ಯಕರ್ತನಾಗಿ ಸಮಾಜದೊಂದಿಗೆ ಇರುತ್ತೇನೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.
ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿರುವ ರಘುಪತಿ ಭಟ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಎಲ್ಲ ಬೂತ್‌ಗಳಲ್ಲೂ ಕಾರ್ಯಕರ್ತರು ನಮ್ಮ ಜೊತೆಗೆ ಇದ್ದರು. ಪಕ್ಷದ ತಪ್ಪು ನಿರ್ಣಯ ಪ್ರತಿಭಟಿಸಿ ಸ್ಪರ್ಧೆ ಮಾಡಿದ್ದೇನೆ. ಮುಂದೆಯೂ ರಾಜಕೀಯದಲ್ಲಿ ಸಕ್ರಿಯವಾಗಿರಲಿದ್ದೇನೆ. ಬಿಜೆಪಿ ಕಾರ್ಯಕರ್ತನಾಗಿಯೇ ಇರುತ್ತೇನೆ ಎಂದರು.
ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕೆ. ರಘುಪತಿ ಭಟ್ 7,039 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ 37,627 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗೆ 13,516 ಮತ ಬಂದಿದೆ.