
Udupi: ಕೊಲೆ ಯತ್ನ-ಮೂವರ ಬಂಧನ
ಉಡುಪಿ: ಇಲ್ಲಿನ ಪುತ್ತೂರಿನ ಸೆಲೂನ್‌ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚರಣ್ ಯು. (18) ಎಂಬಾತನನ್ನು ತಲವಾರು ಮೂಲಕ ಕೊಲೆ ಯತ್ನ ನಡೆಸಲು ಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದ್ದು, ಮೂವರು ಆರೋಪಿಗಳನ್ನು ಸೋಮವಾರ ದಸ್ತಗಿರಿ ಮಾಡಲಾಗಿದೆ. ಚರಣ್ ಹಲ್ಲೆಗೊಳಗಾಗಿದ್ದಾನೆ.
ಚರಣ್ ತನ್ನ ಸೆಲೂನ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಅಭಿ ಕಟಪಾಡಿ ಎಂಬಾತ ಕರೆ ಮಾಡಿ ಶಬರಿ ಎಂಬವನ ಬಗ್ಗೆ ಮಾತನಾಡಬೇಕಾಗಿದೆ. ತಕ್ಷಣ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ಬರುವಂತೆ ತಿಳಿಸಿದ್ದು, ಅದರಂತೆ ಚರಣ್ ತನ್ನ ಸ್ನೇಹಿತ ಸುಜನ್ ಎಂಬಾತನ ಬೈಕ್‌ನಲ್ಲಿ ಹೋಗಿದ್ದ. ಆತನ ಗೆಳೆಯರಾದ ನಾಗರಾಜ್, ಕಾರ್ತಿಕ್ ಮತ್ತು ರಂಜು ಮತ್ತೂಂದು ಸ್ಕೂಟಿಯಲ್ಲಿ ಹೊರಟು ಬಿರಿಯಾನಿ ಪಾಯಿಂಟ್ ಬಳಿಯ ಗೂಡಂಗಡಿ ಬಳಿಗೆ ತೆರಳಿದ್ದರು. ಈ ವೇಳೆ ಪ್ರವೀಣ, ಅಭಿ ಕಟಪಾಡಿ, ದೇಶರಾಜ್, ಶಬರಿ ಮತ್ತು ಪರಿಚಯವಿಲ್ಲದ ಇತರ ಇಬ್ಬರು ಅಲ್ಲಿಯೇ ನಿಂತಿದ್ದ ರಿಕ್ಷಾವೊಂದಕ್ಕೆ ಒರಗಿಕೊಂಡು, ಕೈಯಲ್ಲಿ ತಲವಾರು ಹಿಡಿದುಕೊಂಡು ನಿಂತಿದ್ದರು.
ಚರಣ್ ಮತ್ತು ಆತನ ಗೆಳೆಯರನ್ನು ನೋಡಿದ ತಕ್ಷಣ ಅವರನ್ನು ಕೊಲ್ಲುವ ಉದ್ದೇಶದಿಂದ ತಲವಾರು ಬೀಸಿದ್ದು, ಬೈಕ್ ಮತ್ತು ಸ್ಕೂಟಿಯನ್ನು ಅಲ್ಲಿಯೇ ಬಿಟ್ಟು ತಪ್ಪಿಸಿಕೊಂಡು ಓಡಿಹೋಗುವಾಗ ಬಿಯರ್ ಬಾಟಲಿಗಳನ್ನು ಬಿಸಾಡಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಚರಣ್ ಹಾಗೂ ಸ್ನೇಹಿತರು ತಾವು ಬಿಟ್ಟು ಹೋಗಿದ್ದ ಬೈಕ್ ಹಾಗೂ ಸ್ಕೂಟಿಯನ್ನು ಕೊಂಡುಹೋಗಲು ಹೋದಾಗ ಆರೋಪಿಗಳು ಅವರ ದ್ವಿಚಕ್ರ ವಾಹನಗಳನ್ನು ಹಾನಿಗೊಳಿಸಿ 25 ಸಾವಿರ ರೂ. ನಷ್ಟವುಂಟು ಮಾಡಿದ್ದಾರೆ ಎಂದು ಚರಣ್ ಪೊಲೀಸರಿಗೆ ದೂರು ನೀಡಿದಾನೆ.
ಶಬರಿ ಎಂಬಾತನಿಗೆ ಚರಣ್ ನಿಂದಿಸಿದ ಕಾರಣ ಮುಂದಿಟ್ಟುಕೊಂಡು ಹಳೇ ದ್ವೇಷದಿಂದ ಪ್ರವೀಣ್ ಮತ್ತು ಇತರ ೫ ಮಂದಿ ಸೇರಿ ಕೊಲ್ಲುವ ಉದ್ದೇಶದಿಂದ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ ಎಂದು ನಗರ ಠಾಣೆಯಲ್ಲಿ ಚರಣ್ ನೀಡಿರುವ ದೂರಿನಂತೆ ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಪ್ರವೀಣ್ ಬಡಗುಬೆಟ್ಟು (22), ಅಭಿಷೇಕ್ ಕಟಪಾಡಿ (28) ಮತ್ತು ದೇಶ್‌ರಾಜ್ ಪುತ್ತೂರು (18) ಅವರನ್ನು ದಸ್ತಗಿರಿ ಮಾಡಲಾಗಿದ್ದು, ಇನ್ನೊಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಿಚಾರಣೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪ್ರಕರಣ ತನಿಖೆಯಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್ ತಿಳಿಸಿದ್ದಾರೆ.