
Udupi: ಸಚಿವರ ಟಿಎ ಡಿಎಗಾಗಿ ರಾಜ್ಯ ಸರ್ಕಾರ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ
ಉಡುಪಿ: ಸಿದ್ಧರಾಮಯ್ಯ ಸರ್ಕಾರದ ಗಜ ಗಾತ್ರದ ಕ್ಯಾಬಿನೆಟ್ ಸಚಿವರ ಟಿಎ ಡಿಎಗಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಲಾಗಿದೆ ಎಂದು ಕಾರ್ಕಳ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ‍್ಯದರ್ಶಿ ವಿ. ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಸೋಮವಾರ ಜಿಲ್ಲಾ ಬಿಜೆಪಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳಿಂದಾಗಿ ಅವುಗಳನ್ನು ಮುಂದುವರಿಸುವುದಿರಲಿ, ಸರ್ಕಾರಿ ನೌಕರರಿಗೆ ಸಂಬಳ ನೀಡಲೂ ಹಣ ಇಲ್ಲದಾಗಿದೆ. ಅಭಿವೃದ್ಧಿ ಕಾರ‍್ಯಗಳಂತೂ ದೂರದ ಮಾತಾಗಿದೆ. ಖಾಲಿಯಾಗಿರುವ ಬೊಕ್ಕಸ ಭರ್ತಿ ಮಾಡಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ದಾಖಲೆ ಪ್ರಮಾಣದಲ್ಲಿ 3-3.50 ರೂ. ಹೆಚ್ಚಿಸುವ ಮೂಲಕ ಸಾಮಾನ್ಯ ಜನತೆಗೆ ಹೊರೆಯಾಗಿಸಿದೆ.
77 ಮಂದಿ ಸಚಿವರಿಗೆ ಕ್ಯಾಬಿನೆಟ್ ದರ್ಜೆಯ ಬೇರೆ ಬೇರೆ ಹುದ್ದೆ ನೀಡಲಾಗಿದೆ. ಅವರ ಟಿಎ, ಡಿಎಗೂ ಸರ್ಕಾರದ ಬಳಿ ಹಣ ಇಲ್ಲದಾಗಿದೆ. ಕಾಂಗ್ರೆಸ್ ಆಡಳಿತ ಇರುವಲ್ಲಿ ಬೆಲೆ ಹೆಚ್ಚಾಗಿದೆ. ನೆರೆಯ ರಾಜ್ಯಗಳಲ್ಲಿನ ಬೆಲೆಗಿಂತ ಕರ್ನಾಟಕದಲ್ಲಿ ಕಡಿಮೆ ಇದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಚುನಾವಣೆ ಪೂರ್ವದಲ್ಲಿ ಕೇಂದ್ರ ಏನೂ ನೀಡಿಲ್ಲ ಎಂದು ಚೆಂಬು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಇದೀಗ ಬೆಲೆ ಏರಿಕೆ ಮೂಲಕ ಚೆಂಬು ನೀಡುತ್ತಿದೆ ಎಂದರು.
ಬೆಲೆ ಏರಿಕೆಯ ಆದೇಶ ಹಿಂಪಡೆಯುವ ತನಕ ಬಿಜೆಪಿಯ ಹೋರಾಟ ಮುಂದುವರಿಯಲಿದೆ. ಮುಂಬರುವ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆ ಆಗಲಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆದೇಶ ಹಿಂಪಡೆಯುವ ವರೆಗೂ ಅಧಿವೇಶ ನಡೆಸಲು ಬಿಡುವುದಿಲ್ಲ ಎಂದ ಸುನಿಲ್ ಕುಮಾರ್, ಮುಖ್ಯಮಂತ್ರಿ ಸಿದ್ಧರಾಮಯ್ಯ ತಾನು ದುರಹಂಕಾರ ತೊರೆದು ಜನಪರ ಆಡಳಿತ ನೀಡಬೇಕು. ಬೆಲೆ ಏರಿಕೆ ಕಡಿಮೆ ಮಾಡಬೇಕು, ಗ್ಯಾರಂಟಿ ಯೋಜನೆಗಳನ್ನೂ ನೀಡಬೇಕು, ಅಭಿವೃದ್ಧಿಗೆ ಅನುದಾನವನ್ನೂ ನೀಡಬೇಕು, ಯಾವುದೇ ಹೊಸ ತೆರಿಗೆ ವಿಧಿಸಬಾರದು ಎಂದು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರತಿಭಟನೆಯಲ್ಲಿ ಶಾಸಕರಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ ಮತ್ತು ಗುರುರಾಜ್ ಗಂಟಿಹೊಳೆ, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಮೊದಲಾದವರಿದ್ದರು.