
Ujire: ಸಹಕಾರಿ ಕ್ಷೇತ್ರದ ಪ್ರಗತಿ, ಸಾಧನೆ ಶ್ಲಾಘನೀಯ: ಡಿ. ವೀರೇಂದ್ರ ಹೆಗ್ಗಡೆ
ಉಜಿರೆ: ಪರಸ್ಪರ ಪ್ರೀತಿ-ವಿಶ್ವಾಸ, ನಂಬಿಕೆಯಿಂದ ವ್ಯವಹಾರ ಮಾಡುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಹಕಾರಿ ಸಂಘಗಳಲ್ಲಿ ಶೇ. ನೂರು ಸಾಲ ವಸೂಲಾತಿ ಆಗುತ್ತಿದ್ದು ಸಹಕಾರಿ ಕ್ಷೇತ್ರದ ಪ್ರಗತಿ, ಸಾಧನೆ ಶ್ಲಾಘನೀಯವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳ ಗ್ರಾಮದ ಕಲ್ಲೇರಿಯಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ‘ಉನ್ನತಿ’ ಉದ್ಘಾಟಿಸಿ ಶುಭ ಹಾರೈಸಿದರು.
ಸಮಾಜದ ಎಲ್ಲಾ ಸ್ತರದ ಜನರು ಸಹಕಾರಿ ರಂಗದಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜದ ಸರ್ವಾಂಗೀಣ ಪ್ರಗತಿಯಾಗಬೇಕು. ಜನರ, ಜನರಿಂದ ಮತ್ತು ಜನರಿಗಾಗಿ ಸೇವೆ ಸಲ್ಲಿಸುವ ಸಹಕಾರಿ ಸಂಘಗಳನ್ನು ಎಲ್ಲರೂ ಸೇರಿ ಬಲಪಡಿಸಬೇಕು. ತನ್ಮೂಲಕ ಸರ್ವಾಂಗೀಣ ಪ್ರಗತಿಯಾಗಲಿ ಎಂದು ಅವರು ಶುಭ ಹಾರೈಸಿದರು.
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಸಹಕಾರಿ ಸಂಘಗಳ ಸೇವೆ-ಸಾಧನೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು.
ರೈತರ ಸಭಾಭವನವನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ವಾಣಿಜ್ಯ ಬ್ಯಾಂಕ್‌ಗಳ ತವರೂರಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕ್‌ಗಳು ಜನರ ಸೇವೆಯಲ್ಲಿ ವಿಫಲವಾಗಿ ವಿಲೀನವಾಗುತ್ತಿರುವುದು ಶೋಚನೀಯವಾಗಿದೆ. ಭಾಷೆ ಮತ್ತು ಸಂಸ್ಕೃತಿಯ ಅರಿವಿಲ್ಲದ ಸಿಬ್ಬಂದಿಯೇ ಇದಕ್ಕೆ ಕಾರಣ. ಆದರೆ ಸಹಕಾರಿ ಸಂಘಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸಕಾಲಿಕ ನೆರವು ನೀಡುವುದರಿಂದ ಉತ್ತಮ ಪ್ರಗತಿ ಸಾಧ್ಯವಾಗಿದೆ. ಕೇಂದ್ರ ಸರ್ಕಾರ ಕೂಡಾ ಸಹಕಾರಿ ಕ್ಷೇತ್ರಕ್ಕೆ ಆದ್ಯತೆ ನೀಡುತ್ತಿದೆ ಎಂದರು.
ಶಾಸಕರುಗಳಾದ ಹರೀಶ್ ಪೂಂಜ ಮತ್ತು ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿದರು. ಪ್ರೀತಂ ಅಧ್ಯಕ್ಷತೆ ವಹಿಸಿದರು. ಶ್ರೀನಿವಾಸ ರಾವ್ ಸ್ವಾಗತಿಸಿ, ಧನಲಕ್ಷ್ಮೀ ವಂದಿಸಿದರು.