
Ullal: ಗ್ಲೋಬಲ್ ಮಾರ್ಕೆಟಿನಲ್ಲಿ ಬೆಂಕಿ ಅವಘಡ-22 ಮಳಿಗೆಗಳಿಗೆ ಹಾನಿ
Tuesday, June 11, 2024
ಉಳ್ಳಾಲ: ಕಳೆದ ರಾತ್ರಿಯಿಡೀ ಸುರಿಯುತ್ತಿದ್ದ ಮಳೆಯ ನಡುವೆಯೂ ತೊಕ್ಕೊಟ್ಟು ಸಮೀಪದ ಕಲ್ಲಾಪು ಗ್ಲೋಬಲ್ ಮಾರ್ಕೆಟಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಸುಮಾರು 22 ಹಣ್ಣಿನ ಮಳಿಗೆಗಳಿಗೆ ಬೆಂಕಿ ವ್ಯಾಪಿಸಿ ಲಕ್ಷಾಂತರ ರೂ. ಮೌಲ್ಯದ ಹಣ್ಣುಗಳು ಸುಟ್ಟು ಕರಕಲಾಗಿವೆ.
ಇಂದು ಮುಂಜಾನೆ ನಸುಕಿನ 3 ಗಂಟೆಯ ವೇಳೆ ಆಕಸ್ಮಿಕವಾಗಿ ಬೆಂಕಿ ಹಚ್ಚಿಕೊಂಡಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯುಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಮಾರ್ಕೆಟ್ ಒಳಗಿನ ಸುಮಾರು 22 ಹಣ್ಣಿನ ಸ್ಟಾಲ್‌ಗಳಿಗೆ ಬೆಂಕಿಯ ಕೆಣ್ಣಾಲಿಗೆ ವ್ಯಾಪಿಸಿದೆ. ಸ್ಟಾಲ್‌ಗಳಲ್ಲಿ ದಾಸ್ತಾನು ಇರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಹಣ್ಣುಗಳು ಬೆಂಕಿಯ ಕೆಣ್ಣಾಲಿಗೆಗೆ ಸುಟ್ಟು ಕರಕಲಾಗಿವೆ.
ಸ್ಥಳಕ್ಕೆ ಕೂಡಲೇ ದೌಡಾಯಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯಲ್ಲಿ ಹಣ್ಣುಗಳಲ್ಲದೆ ಬೆಲೆ ಬಾಳುವ ಸೊತ್ತುಗಳು ಸುಟ್ಟು ಕರಕಲಾಗಿದ್ದು ವ್ಯಾಪಾರಿಗಳಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಶಾಸಕ ಯು.ಟಿ. ಖಾದರ್, ಉಳ್ಳಾಲ ತಹಶೀಲ್ದಾರ್ ಪ್ರದೀಪ್, ನಗರಸಭಾ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.