
Ullal: ಗೇರು ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಗಳಿಸುವ ಬೆಳೆ "ತಿಂಗಳ ಬೆಳಕು" ಎರಡನೇ ಸಂಚಿಕೆಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ
ಉಳ್ಳಾಲ: ತಿಂಗಳ ಬೆಳಕಿನಂತಹ ಹಲವು ಕಾರ್ಯಕ್ರಮದ ಮೂಲಕ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಉಳ್ಳಾಲ ಪತ್ರಕರ್ತರ ಸಂಘ ಅಭಿವೃದ್ಧಿ ಯತ್ತ ಹೆಜ್ಜೆ ಇಡುತ್ತಿದೆ. ನ್ಯಾಯಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡುತ್ತಾ ಬಂದ ಪತ್ರಕರ್ತರಿಂದಾಗಿ ನ್ಯಾಯ ಸಿಕ್ಕಿದೆ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಎಲ್ಲದಕ್ಲೂ ನಾವು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದರಿಂದ ಮುಂದಿನ ಸಮಾಜವನ್ನು ಉತ್ತಮವಾಗಿ ರೂಪಿಸಲು ಪ್ರೇರಣೆ ಆಗಲಿದೆ ಎಂದು ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಹೇಳಿದರು.
ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಳ್ಳಾಲ ತಾಲೂಕು ಘಟಕದ ಆಶ್ರಯದಲ್ಲಿ ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ನಡೆದ "ತಿಂಗಳ ಬೆಳಕು" ಎರಡನೇ ಸಂಚಿಕೆಯಲ್ಲಿ ಅವರು ಮಾಧ್ಯಮದ ಜತೆ ಸಂವಾದ ನಡೆಸಿದರು.
ಗೇರುಬೆಳೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಆದಾಯ ಗಳಿಸುವ ಬೆಳೆ ಅಗಿದ್ದು ರೈತರು ಕಂಗು ತೆಂಗಿನ ಬೆಳೆ ಬೆಳೆಯುತ್ತಾ ಅದರಿಂದ ಹೆಚ್ಚಿನ ಆದಾಯ ಸಿಗುತ್ತದೆ ಎಂಬ ಕಾರಣಕ್ಕೆ ಗೇರು ಬೆಳೆಯಿಂದ ಆಸಕ್ತಿ ಕಳೆದುಕೊಂಡಿರುವುದು ಅಂಕಿಅಂಶಗಳಿಂದ ಸಾಬೀತಾಗಿದೆ. ಆದರೆ ವಾಸ್ತವದಲ್ಲಿ ಗೇರುಬೆಳೆ ಅಧಿಕ ಲಾಭ ಕೊಡುವ ಬೆಳೆ ಎಂಬುದು ಅದಕ್ಕಿರುವ ಬೇಡಿಕೆಯಿಂದ ಅರ್ಥೈಸಿಕೊಳ್ಳಬಹುದು. ಕೃಷಿಕರು ಯಾವುದೇ ಬೆಳೆ ಬೆಳೆಯದೆ ಖಾಲಿ ಬಿಟ್ಟ ಭೂಮಿಯಲ್ಲಿ ಬಹಳಷ್ಟು ಜೀವ ಸತ್ವ ಇರುವ ಗೇರುಬೆಳೆಯತ್ತ ಆದ್ಯತೆ ಕೊಡಬೇಕು ಎಂದು ಆಗ್ರಹಿಸಿದರು.
ಉದ್ಘಾಟಿಸಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ನಿರ್ದೇಶಕ ಕೆ.ಟಿ. ಸುವರ್ಣ ಯುವ ಪತ್ರಕರ್ತರ ತಂಡ ಕೆಟ್ಟದ್ದನ್ನು ಸ್ವಚ್ಛಗೊಳಿಸುವ ಒಳ್ಳೆಯದನ್ನು ಪಸರಿಸುವ ಕಾರ್ಯ ಆಗಲಿ. ನಟ ದರ್ಶನ್ ತಂಡಗೈದ ಕೃತ್ಯ ಹಿಂದಿನ ದಿನಗಳಲ್ಲಾಗಿದ್ದರೆ ಮುಚ್ಚಿ ಹೋಗುತ್ತಿತ್ತು. ಆದರೆ ಈಗ ಮಾಧ್ಯಮದ ಪ್ರಭಾವದಿಂದಾಗಿ ಆ ಪ್ರಕರಣ ಬೆಳಕಿಗೆ ಬರುವಂತಾಯಿತು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಚಂದ್ರಿಕಾ ರೈ, ಸುರೇಖ ಚಂದ್ರಹಾಸ್ ತಲಪಾಡಿ, ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಅನ್ಸಾರ್ ಇನೋಳಿ, ಸದಸ್ಯ ಮೋಹನ್ ಕುತ್ತಾರು, ಉಳ್ಳಾಲ ತಾಲೂಕು ಪತ್ರಕರ್ತರ ಸಂಘದ ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ಸದಸ್ಯರಾದ ಆಸಿಫ್ ಬಬ್ಬುಕಟ್ಟೆ, ಅಶ್ವಿನ್ ಕುತ್ತಾರು, ಶಿವಶಂಕರ್, ರಜನೀಕಾಂತ್ ತೊಕ್ಕೊಟ್ಟು ಹಾಗೂ ಸುಶ್ಮಿತಾ ಉಪಸ್ಥಿತರಿದ್ದರು.
ಉಳ್ಳಾಲ ಘಟಕದ ಉಪಾಧ್ಯಕ್ಷ ದಿನೇಶ್ ನಾಯಕ್ ತೊಕ್ಕೊಟ್ಟು ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಸತೀಶ್ ಕೊಣಾಜೆ ಕೆ.ಟಿ. ಸುವರ್ಣ ಅವರನ್ನು ಹಾಗೂ
ಕಾರ್ಯದರ್ಶಿ ವಜ್ರ ಗುಜರನ್ ಮಮತಾ ಗಟ್ಟಿ ಅವರನ್ನು ಪರಿಚಯಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ್ ಪೊಯ್ಯತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು.