Ullal: ತೀವ್ರಗೊಂಡ ಕಡಲ್ಕೊರೆತ-ಮನೆಗಳು ಅಪಾಯದಲ್ಲಿ: ಸ್ಥಳಾಂತರ

Ullal: ತೀವ್ರಗೊಂಡ ಕಡಲ್ಕೊರೆತ-ಮನೆಗಳು ಅಪಾಯದಲ್ಲಿ: ಸ್ಥಳಾಂತರ


ಉಳ್ಳಾಲ: ಉಚ್ಚಿಲ ಬಟ್ಟಪಾಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದ, ಗುರುವಾರ ಮನೆಯೊಂದು ಸಮುದ್ರಪಾಲಾಗಿದೆ.

ಅಪಾಯದಂಚಿನಲ್ಲಿದ್ದ ಈ ಮನೆಯಲ್ಲಿ ನೆಲೆಸಿದ್ದ ಬೀಫಾತುಮ್ಮಾ ಅವರ ಕುಟುಂಬವನ್ನು ಬುಧವಾರವೇ ಸ್ಥಳಾಂತರ ಮಾಡಿದ್ದರಿಂದ ಸಂಭಾವ್ಯ ಅಪಾಯ ತಪ್ಪಿದೆ. ಈ ಪ್ರದೇಶದಲ್ಲಿ ಅಪಾಯದಂಚಿನಲ್ಲಿರುವ ಮೂರು ಮನೆಗಳ ಕುಟುಂಬಗಳ ಸದಸ್ಯರನ್ನು ಗುರುವಾರ ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. 

ಬಟ್ಟಪಾಡಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದರಿಂದ ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮತ್ತಡಿ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸಹಿತ ಹಲವು ಅಧಿಕಾರಿಗಳು ತೆರಳಿ ಬೀಫಾತುಮ್ಮ ಅವರಲ್ಲಿ ಮನೆ ಸ್ಥಳಾಂತರಕ್ಕೆ ಸೂಚನೆ ನೀಡಿದ್ದರು. ಅದರಂತೆ ಬೀಫಾತುಮ್ಮ ಕುಟುಂಬವು ಸಂಬಂಧಿಕರ ಮನೆಗೆ ತೆರಳಿತ್ತು. ಅವರು ಸ್ಥಳಾಂತರಗೊಂಡ ಮರುದಿನವೇ ಅವರ ಮನೆ ಕಡಲ್ಕೊರೆತ ಹೊಡೆತಕ್ಕೆ ಧರಾಶಾಯಿಯಾಗಿದೆ. 

ಮತ್ತೆ ಮೂರು ಮನೆಗಳು...

ಬಟ್ಟಪಾಡಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ತೀವ್ರಗೊಂಡಿದ್ದು, ಬೀಫಾತುಮ್ಮ ಅವರ ಮನೆಯ ಹಿಂಬದಿಯಲ್ಲೇ ಇರುವ ಹಲೀಮಮ್ಮ, ನಫೀಸ ಹಾಗೂ ಸೌದಾ ಎಂಬವರ ಮೂರು ಮನೆಗಳು ಅಪಾಯಕ್ಕೆ ಸಿಲುಕಿವೆ. ಈ ಮನೆಗಳಿಗೂ ಕಡಲ ಅಲೆಗಳ ರಭಸವಾಗಿ ಅಪ್ಪಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ಮನೆಗಳ ನಿವಾಸಿಗಳನ್ನು ಗುರುವಾರ ಸ್ಥಳಾಂತರಿಸಲಾಗಿದೆ. 

ಬೀಫಾತುಮ್ಮ ಸೇರಿ ಸ್ಥಳಾಂತರಗೊಂಡ ನಾಲ್ಕು ಕುಟುಂಬಗಳು ಸದ್ಯ ಸಂಬಂಧಿಕರ ಮನೆಗಳಲ್ಲಿ ನೆಲೆಸಿದ್ದು, ಶೀಘ್ರವೇ ಅವರುಗಳಿಗೆ ಪರ್ಯಾಯ ಬಾಡಿಗೆ ಮನೆಗಳ ವ್ಯವಸ್ಥೆ ಮಾಡುವುದಾಗಿ ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮತ್ತಡಿ ತಿಳಿಸಿದ್ದಾರೆ. 

ಕೆಲ ದಿನಗಳ ಹಿಂದೆ ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ನಡೆದ ಪ್ರಾಕೃತಿಕ ವಿಕೋಪ ತಡೆಯ ಮುಂಜಾಗ್ರತಾ ಸಭೆಯಲ್ಲಿ ಕಡಲ ತೀರದಲ್ಲಿ ಅಪಾಯದಂಚಿನಲ್ಲಿರುವ ಮನೆಗಳ ನಿವಾಸಿಗಳನ್ನು ಸ್ಥಳಾಂತರ ಮಾಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. 

ಮನೆ ಸಮುದ್ರಪಾಲಾದ ಬಟ್ಟಪಾಡಿ ಪ್ರದೇಶಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಭೇಟಿ ಮಾಡಿ ಸಂತ್ರಸ್ತರಲ್ಲಿ ಮಾತುಕತೆ ನಡೆಸಿದರು.

ಕಳೆದ ವರ್ಷ ಇದೇ ಪ್ರದೇಶದಲ್ಲಿ ನೆಲೆಸಿದ್ದ ವೃದ್ಧೆ ರಾಜೀವಿ ಎಂಬವರ ಮನೆ ಕಡಲ್ಕೊರೆತಕ್ಕೆ ಕೊಚ್ಚಿ ಹೋಗಿತ್ತು. 

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article