
Mangalore: ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್ ವಿಸ್ತರಣೆ: ಉಜ್ವಲ್ ಗುಲ್ವಾನೆ
ಮಂಗಳೂರು: ಬಿಎಸ್‌ಎನ್‌ಎಲ್ 4ಜಿ ನೆಟ್‌ವರ್ಕ್‌ನ್ನು ದ.ಕ.ಜಿಲ್ಲಾದ್ಯಂತ ವಿಸ್ತರಿಸಲಾಗುವುದು. ಮುಂದಿನ ದಿನಗಳಲ್ಲಿ ಇದನ್ನು 5ಜಿಗೆ ಪರಿವರ್ತಿಸಬಹುದಾಗಿದೆ. ದ.ಕ.ಜಿಲ್ಲೆಯಲ್ಲಿ ೪ಜಿ ಇದರ 412 ಮತ್ತು ಉಡುಪಿ ಜಿಲ್ಲೆಯಲ್ಲಿ 198 ಸಹಿತ ಒಟ್ಟು 610 ಟವರ್‌ಗಳನ್ನು ನಿರ್ಮಿಸುವ ಉದ್ದೇಶವಿದೆ. ಈಗಾಗಲೆ ಎರಡು ಜಿಲ್ಲೆಗಳಲ್ಲಿ 20 ಟವರ್ಗಳ್ನು ೪ಜಿಗಾಗಿ ಪ್ರಯೋಗ ಪರೀಕ್ಷೆ ಮಾಡಲಾಗಿದೆ. ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮೊಬೈಲ್ ಸಂಪರ್ಕವೇ ಇಲ್ಲದ 173 ಹಳ್ಳಿಗಳಿಗೆ ನೇರವಾಗಿ ೪ಜಿ ಸಂಪರ್ಕ ನೀಡಲಾಗುವುದು. ದ.ಕ.ಜಿಲ್ಲೆಯ ಎಳನೀರು ಗ್ರಾಮಕ್ಕೂ ೪ಜಿ ಸಂಪರ್ಕ ನೀಡಲಾಗುತ್ತದೆ ಎಂದು ಬಿಎಸ್‌ಎನ್‌ಎಲ್ ಚೀಫ್ ಜನರಲ್ ಮ್ಯಾನೇಜರ್ ಉಜ್ವಲ್ ಗುಲ್ವಾನೆ ಹೇಳಿದ್ದಾರೆ.
ಬಿಎಸ್‌ಎನ್‌ಎಲ್ ಮಂಗಳೂರು ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ೪ಜಿ ಸ್ಯಾಚುರೇಶನ್ ಯೋಜನೆಯನ್ನು ಬಿಎಸ್‌ಎನ್‌ಎಲ್ ಕೈಗೆತ್ತಿಕೊಂಡಿವೆ. ಇದರ ಮೇಲ್ವಿಚಾರಣೆ ಯನ್ನು ಪ್ರಧಾನ ಮಂತ್ರಿ ಕಾರ್ಯಾಲಯದಿಂದ ನಡೆಸಲಾಗುತ್ತಿದೆ. ಈ ಯೋಜನೆಯ ಮೊದಲ ಹಂತದಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡಿರುವ ಕಾರ್ಯಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ 76 ಸ್ಥಳಗಳನ್ನು ಗುರುತಿಸಲಾಗಿದೆ. ಈವರೆಗೆ ಈ ಸ್ಥಳದಲ್ಲಿ ಯಾವುದೇ ಖಾಸಗಿ ಮೊಬೈಲ್ ಆಪರೇಟರ್‌ಗಳಿಂದ ನೆಟ್‌ವರ್ಕ್ ಕವರೇಜ್ ಲಭ್ಯವಿರುವುದಿಲ್ಲ. ದ.ಕ.ಜಿಲ್ಲೆಯಲ್ಲಿ 43 ಸ್ಥಳಗಳ ಪೈಕಿ 40 ಕಡೆಗಳಲ್ಲಿ ಮತ್ತು ಉಡುಪಿ ಜಿಲ್ಲೆಯಲ್ಲಿ 33 ಸ್ಥಳಗಳ ಪೈಕಿ 30 ಕಡೆ ಟವರ್ ನಿರ್ಮಾಣ ಕಾರ್ಯ ಪೂರ್ಣಗೊಂಡಿವೆ ಎಂದರು.
ಮಾರಾಟ...
ನಷ್ಟದಲ್ಲಿರುವ ಭಾರತ್ ಸಂಚಾರ್ ನಿಗಮ ಲಿಮಿಟೆಡ್ (ಬಿಎಸ್‌ಎನ್‌ಎಲ್) ತನ್ನ ಆದಾಯವನ್ನು ವೃದ್ಧಿಸುವ ಸಲುವಾಗಿ ನಗರದ ಕದ್ರಿ ಹಿಲ್ಸ್ ಪಾರ್ಕ್ ರಸ್ತೆಯಲ್ಲಿರುವ ತನ್ನ ಜಮೀನನ್ನು ಮಾರಾಟ ಮಾಡುವ ಪ್ರಕ್ರಿಯೆ ನಡೆಸಲಾಗಿದೆ. ಕದ್ರಿಯಲ್ಲಿರುವ ಈ ಜಮೀನು ಸುಮಾರು 2 ಎಕರೆ ವಿಸ್ತೀರ್ಣ ಹೊಂದಿದೆ. ಹರಾಜಿನಲ್ಲಿ ಪಾಲ್ಗೊಳ್ಳುವವರು ಜುಲೈ 1ರ ಅಪರಾಹ್ನ 3 ಗಂಟೆಯೊಳಗೆ ಬಿಡ್ ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಅದಲ್ಲದೆ ಬಜಾಲ್ ಗ್ರಾಮದ ಎಕ್ಕೂರು ಸಮೀಪದ ಕೆಎಸ್ ರಾವ್ ನಗರ ಮತ್ತು ಕುಂಜತ್ತಬೈಲ್ನ ಮೈಕ್ರೋವೇವ್ ಸ್ಟಾಫ್ ಕ್ವಾಟ್ರಸ್ ಕಾಂಪೌಂಡ್ ಹಾಗೂ ಬೋಳಾರದ ಟೆಲಿಫೊನ್ ಎಕ್ಸ್ಚೇಂಜ್ ಕಾಂಪೌಂಡ್ನ ಜಮೀನನ್ನು ಕೂಡ ಮುಂದಿನ ದಿನಗಳಲ್ಲಿ ಮಾರಾಟ ಮಾಡುವ ಪ್ರಕ್ರಿಯೆ ನಡೆಸಲಾಗುವುದು ಎಂದು ಉಜ್ವಲ್ ಗುಲ್ವಾನೆ ಹೇಳಿದರು.
ಬಿಎಸ್‌ಎನೆಲ್ ಹೊಸದಿಲ್ಲಿಯ ಸಿಜಿಎಂ ಪರಮೇಶ್ವರಿ ದಯಾಳ್, ಮಂಗಳೂರಿನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಎಸ್.ಜಿ. ದೇವಾಡಿಗ, ಹಿರಿಯ ಅಧಿಕಾರಿಗಳಾದ ನವೀನ್ ಗುಪ್ತಾ, ದೀಪಕ್ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.