
Vitla: 3.20 ಲಕ್ಷ ಮೌಲ್ಯದ ನಗ-ನಗದು ಕಳವು
Friday, June 28, 2024
ವಿಟ್ಲ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು 3,20,000 ಲಕ್ಷ ರೂ. ಮೌಲ್ಯದ ನಗ-ನಗದು ಕಳವು ಮಾಡಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಮೀಪದ ಬೋಳಂತೂರು ಗ್ರಾಮದ ಬಂಗಾರಕೋಡಿ ಎಂಬಲ್ಲಿ ನಡೆದಿದೆ. ಬಂಗಾರಕೋಡಿಯ ಝೀನತ್ ಎಂಬವರ ಮನೆಯಲ್ಲಿ ಕಳೆದ ರಾತ್ರಿ ಈ ಕಳವು ನಡೆದಿದೆ.
ಮನೆಯ ಟೇರೆಸ್ ಬಾಗಿಲಿನ ಚಿಲಕ ಮುರಿದು ಒಳ ನುಗ್ಗಿರುವ ಕಳ್ಳರು ಕೋಣೆಯಲ್ಲಿದ್ದ ಕಪಾಟಿನ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆರೆದು ಅದರೊಳಗಿದ್ದ, 52 ಗ್ರಾಂನ ಚಿನ್ನಾಭರಣ, ವಿದೇಶದಲ್ಲಿರುವ ಝೀನತ್ ಪುತ್ರ ತಂದಿಟ್ಟಿದ್ದ ಐದು ಸಾವಿರ ಸೌದಿಯ ರಿಯಲ್ಸ್ ಕರೆನ್ಸಿ (ಭಾರತದ ಮೌಲ್ಯ ಅಂದಾಜು 1,15,000 ರೂ.) ಕಳವುಗೈದಿದ್ದಾರೆ ಎಂದು ಝೀನತ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 3,20,000 ರೂ. ಆಗಬಹುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.