
Bantwal: ಕಾಜಲ ಕಿರುಹೊಳೆಯ ಕಾಲುದಾರಿಯಲ್ಲಿ ಶವ ಹೊತ್ತು ತಂದು ಗ್ರಾಮಸ್ಥರು!
ಬಂಟ್ವಾಳ: ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳ ಗಡಿ ಪ್ರದೇಶವಾದ ಬೆಂಚಿನಡ್ಕ-ಕಾಜಲ ಪ್ರದೇಶಗಳ ನಡುವೆ ಹರಿಯುವ ಕಿರುಹೊಳೆಗೆ ಕನಿಷ್ಠ ಲಘವಾಹನ ಸಂಚರಿಸಬಹುದಾದ ಸೇತುವೆಯಿಲ್ಲದ ಕಾರಣ ವೃದ್ಧರೋರ್ವರ ಮೃತದೇಹವನ್ನು ಸ್ಥಳೀಯರು ಕಿಂಡಿ ಅಣೆಕಟ್ಟಿನ ಕಾಲುದಾರಿಯಲ್ಲಿ ಪ್ರಯಾಸಪಟ್ಟು ಹೊತ್ತು ಕೊಂಡು ಬಂದ ದೃಶ್ಯವೊಂದು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.
ಬಂಟ್ವಾಳ ತಾಲೂಕಿನ ನಯನಾಡು ಮತ್ತು ಬೆಳ್ತಂಗಡಿ ತಾಲೂಕಿನ ಕಾಜಲ ಪ್ರದೇಶಕ್ಕೆ ಸಂಪರ್ಕ ರಸ್ತೆಯ ಮಧ್ಯೆ ಕಿರುಹೊಳೆ ಹರಿಯುತ್ತಿದ್ದು, ಇದಕ್ಕೊಂದು ಕಿಂಡಿ ಅಣೆಕಟ್ಟು ಸಹಿತ ಲಘುವಾಹನಗಳ ಸಂಚಾರದ ನಿಟ್ಟಿನಲ್ಲಿ ಸೇತುವೆ ನಿರ್ಮಿಸುವಂತೆ ಸ್ಥಳೀಯರು ಜನಪ್ರತಿನಿಧಿಗಳ ಮೂಲಕ ಸರಕಾರಕ್ಕೆ ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಇದಕ್ಕೆ ಕವಡೆ ಕಾಸಿನ ಕಿಮ್ಮತ್ತು ಸಿಕ್ಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಳೆಗಾಲದಲ್ಲಿ ಕಿಂಡಿ ಅಣೆಕಟ್ಟುವಿನ ಕಾಲುದಾರಿಯಲ್ಲಿಯೇ ಸಂಚರಿಸಬೇಕಾದ ಪರಿಸ್ಥಿತಿ ಸ್ಥಳೀಯರದ್ದಾಗಿದೆ. ಪ್ರತಿ ನಿತ್ಯ ಶಾಲಾ ವಿದ್ಯಾರ್ಥಿಗಳು ಸಹಿತ ಗ್ರಾಮಸ್ಥರು ಅಗಲಕಿರಿದಾದ ಕಾಲು ದಾರಿಯಲ್ಲೇ ನಡೆದಾಡುತ್ತಾರೆ. ಕೊಂಚ ಆಯತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ಈ ಕಾಲುದಾರಿ ಹೊರತು ಪಡಿಸಿದರೆ ಕಾಜಲು ಗ್ರಾಮಸ್ಥರು ಪುರಿಯ, ಪುಂಜಾಲಕಟ್ಟೆ, ಮೂರ್ಜೆ ದಾರಿಯಾಗಿ ನಯನಾಡಿಗೆ ಸುಮಾರು 15 ಕಿ.ಮೀ. ಸುತ್ತು ಬಳಸಿ ಬರಬೇಕಾಗಿದೆ. ಮಳೆಗಾಲದಲ್ಲಿ ಕಿರುಹೊಳೆ ತುಂಬಿ ಹರಿದಾಗ ನೀರು ಇಳಿಯುವ ತನಕ ಕಾಯಬೇಕಾಗುತ್ತದೆ, ಇಲ್ಲಿ ಕಾಜಲ ಪರಿಸರದ ಜನತೆಯ ಕೂಗು ಅರಣ್ಯ ರೋಧನವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶುಕ್ರವಾರ ರಾತ್ರಿ ಕಾಜಲ ಪರಿಸರದ ವೃದ್ಧರೋರ್ವರು ನಿಧನರಾಗಿದ್ದು, ಅವರ ಅಂತ್ಯಕ್ರಿಯೆಗಾಗಿ ಮೃತದೇಹವನ್ನು ಸ್ಥಳೀಯ ಯುವಕರು ಶನಿವಾರ ಹದಗೆಟ್ಟ ಕಚ್ಚಾ ಸಂಪರ್ಕ ರಸ್ತೆ ಹಾಗೂ ಕಿರುಹೊಳೆಯ ಕಾಲುದಾರಿಯಲ್ಲಿ ಪ್ರಯಾಸಪಟ್ಟು ಸುಮಾರು ಒಂದು ಕಿಲೋಮೀಟರ್ ದೂರದ ತನಕ ತಂದು ಬಳಿಕ ಅಂಬ್ಯುಲೆನ್ಸ್ ಮೂಲಕ ಪಿಲತಬೆಟ್ಟು ಗ್ರಾಮದ ನಯನಾಡಿನಲ್ಲಿರುವ ಮಿತ್ತಬೆಟ್ಟು ರುದ್ರಭೂಮಿಗೆ ಸಾಗಿಸಲಾಯಿತು. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಸೇತುವೆ ನಿರ್ಮಿಸುವ ನಿಟ್ಟಿನಲ್ಲಿ ಗಮನಹರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.