
Mangalore: ಉಳಾಯಿಬೆಟ್ಟು ದರೋಡೆ ಪ್ರಕರಣ-10 ಮಂದಿಯ ಬಂಧನ
ಮಂಗಳೂರು: ಭಾರೀ ಕುತೂಹಲ ಮೂಡಿಸಿದ್ದ ಉಳಾಯಿಬೆಟ್ಟು ದರೋಡೆ ಪ್ರಕರಣ ಸಂಬಂಧಿಸಿ ಮಂಗಳೂರು ಪೊಲೀಸರು ಕೇರಳ ಮೂಲದ ನಟೋರಿಯಸ್ ದರೋಡೆಕೋರರು ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದರು.
ನೀರುಮಾರ್ಗ ನಿವಾಸಿಗಳಾದ ವಸಂತ ಕುಮಾರ್ (42), ರಮೇಶ ಪೂಜಾರಿ(42), ರೇಮಂಡ್ ಡಿಸೋಜ47), ಪೈವಳಿಕೆ ಕುರುಡಪದವು ನಿವಾಸಿ ಬಾಲಕೃಷ್ಣ ಶೆಟ್ಟಿ(48), ತೃಶೂರು ಜಿಲ್ಲೆಯ ಜಾಕಿರ್ ಯಾನೆ ಶಾಕೀರ್ (56), ವಿನೋಜ್ (38), ಸಜೀಶ್ (32), ಸತೀಶ್ ಬಾಬು(44), ಶಿಜೋ ದೇವಸ್ಸಿ (38), ತಿರುವನಂತಪುರ ಜಿಲ್ಲೆಯ ಬಿಜು (41) ಬಂಧಿತರು.
ಮನೆ ಡ್ರೈವರ್ ಮುಖ್ಯ ಸೂತ್ರದಾರ:
ತನಿಖೆಯ ಸಂದರ್ಭದಲ್ಲಿ ಪದ್ಮನಾಭ ಕೋಟ್ಯಾನ್ ಜೊತೆಗೆ ಲಾರಿ ಚಾಲಕನಾಗಿದ್ದ ನೀರುಮಾರ್ಗ ನಿವಾಸಿ ವಸಂತ ಪೂಜಾರಿ ಬಗ್ಗೆ ಶಂಕೆ ಉಂಟಾಗಿತ್ತು. ಕೋಟ್ಯಾನ್ ಮನೆಯಲ್ಲಿ ಕೋಟಿಗಟ್ಟಲೆ ಹಣ ಇದೆಯೆಂದು ಸ್ಥಳೀಯ ರೇಮಂಡ್ ಡಿಸೋಜ ಎಂಬವರ ಜೊತೆಗೆ ಚರ್ಚೆ ಮಾಡಿದ್ದರು. ಇದರಂತೆ, ಕೋಟ್ಯಾಂತರ ಹಣವನ್ನು ಲೂಟಿ ಮಾಡಲು ರೇಮಂಡ್ ಸ್ಕೆಚ್ ಹಾಕಿದ್ದ. ಇದಕ್ಕಾಗಿ ಕಾಸರಗೋಡು ಜಿಲ್ಲೆಯ ಪೈವಳಿಕೆ ಬಾಲಕೃಷ್ಣ ಶೆಟ್ಟಿ ಮತ್ತು ಕೆಲವು ಕೇರಳ ಮೂಲದ ಆರೋಪಿಗಳನ್ನು ಸಂಪರ್ಕ ಮಾಡಿದ್ದ. ಮನೆ ಹೇಗಿದೆ ಎನ್ನುವುದರ ಬಗ್ಗೆ ಸಂಪೂರ್ಣ ಸ್ಕೆಚ್ ಅನ್ನು ವಸಂತ ನೀಡಿದ್ದಲ್ಲದೆ, ಮನೆಯಲ್ಲಿ ಯಾರೆಲ್ಲ ಇದ್ದಾರೆಂದು ಆರೋಪಿಗಳಿಗೆ ಮಾಹಿತಿ ನೀಡಿದ್ದ.
ಮನೆಯಲ್ಲಿ 100 ಕೋಟಿ ನಗದು ಇದೆಯೆಂದು ಕೇರಳ ತಂಡಕ್ಕೆ ರೇಮಂಡ್ ಡಿಸೋಜ ಮಾಹಿತಿ ನೀಡಿದ್ದ. ಇದಕ್ಕಾಗಿ ಆರೋಪಿಗಳು 15ರಷ್ಟು ಚೀಲಗಳನ್ನು ರೆಡಿ ಮಾಡಿಕೊಂಡು ಬಂದಿದ್ದರು. ಜಾಕೀರ್ ಹುಸೇನ್ ತನಿಖೆಯ ದಿಕ್ಕು ತಪ್ಪಿಸಲು ಹಿಂದಿ ಭಾಷೆ ಮಾತನಾಡುತ್ತ ಪದ್ಮನಾಭ ಕೋಟ್ಯಾನ್ ಮೇಲೆ ಹಲ್ಲೆ ಮಾಡಿದ್ದ. ಇತರರು ಮನೆಯವರನ್ನು ಬೆದರಿಸಿ ಹಣ ಎಲ್ಲಿದೆ ಎಂದು ಹುಡುಕಾಟ ನಡೆಸಿದ್ದರು. ಆರೋಪಿಗಳಿಂದ 9 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ನಾಲ್ಕು ಜನರನ್ನು ನಿನ್ನೆ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಇವತ್ತು ಆರು ಮಂದಿಯನ್ನು ಅರೆಸ್ಟ್ ಮಾಡಿದ್ದೇವೆ ಎಂದು ಸುದ್ದಿಗೋಷ್ಟಿಯಲ್ಲಿ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
300 ಕೋಟಿ ಇದೆಯೆಂದು ಬಿಂಬಿಸಿದ್ದ ತಂಡ
ಕೊನೆ ಕೊನೆಗೆ ಕೇರಳ ತಂಡಕ್ಕೆ 300 ಕೋಟಿ ನಗದು ಇದೆಯೆಂದು ಮಾಹಿತಿ ಹೋಗಿತ್ತು. ಕೋಟ್ಯಾನ್ ಮಲಗುತ್ತಿದ್ದ ಬೆಡ್ ಅಡಿಭಾಗದಲ್ಲಿ ನಗದು ಹಣ ಇದೆಯೆಂದು ಶಂಕೆಯಲ್ಲಿ ಆರೋಪಿಗಳ ತಂಡ ಆರು ತಿಂಗಳಿನಿಂದ ಸ್ಕೆಚ್ ಹಾಕಿತ್ತು. ಭಾರೀ ಹಣ ಇದೆಯೆಂದು ದರೋಡೆ ಬಗ್ಗೆ ಸಾಕಷ್ಟು ಮುಂಜಾಗ್ರತೆ ವಹಿಸಿ ಸಂಚು ನಡೆಸಿತ್ತು. ಜೂನ್ 18ರಂದು ಆರೋಪಿಗಳು ದರೋಡೆಗೆ ಯತ್ನಿಸಿದ್ದರು. ಕೊನೆ ಕ್ಷಣದಲ್ಲಿ ಕೈಬಿಟ್ಟು ಬಳಿಕ ಎರಡು ದಿನ ಬಿಟ್ಟು 21ರಂದು ಸಂಜೆಯೇ ಮನೆ ಹೊಕ್ಕಿದ್ದರು. ದರೋಡೆ ಪ್ರಕರಣ ಮಂಗಳೂರು ಪೊಲೀಸರಿಗೆ ಭಾರೀ ಸವಾಲಾಗಿ ಪರುಣಮಿಸಿತ್ತು.
ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ದಿನೇಶ್ ಕುಮಾರ್, ಎಸಿಪಿಗಳಾದ ನಝ್ಮಾ ಫಾರುಕ್, ಗೀತಾ ಕುಲಕರ್ಣಿ ಉಪಸ್ಥಿತರಿದ್ದರು.