
Mangalore: ದಲಿತ ನೌಕರರಿಗೆ ಮಾನಸಿಕ ತೊಂದರೆ-ಜು.15ರಂದು ಪ್ರತಿಭಟನೆ
ಮಂಗಳೂರು: ಬ್ಯಾಂಕೊಂದರಲ್ಲಿ ದಲಿತ ನೌಕರರಿಗೆ ವರ್ಗಾವಣೆಯ ನೆಪದಲ್ಲಿ ಮಾನಸಿಕ ತೊಂದರೆ ನೀಡಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಆರೋಪಿಸಿದ್ದು, ಜು. 15ರಂದು ಧರಣಿ ಸತ್ಯಾಗ್ರಹ ನಡೆಸುವುದಾಗಿ ಹೇಳಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ ಸಮಿತಿ ಜಿಲ್ಲಾ ಸಂಚಾಲಕ ರಘು ಕೆ. ಎಕ್ಕಾರು, ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರಿಗೆ ಪದೇ ಪದೇ ವರ್ಗಾವಣೆ ನೀಡಿ ಮಾನಸಿಕವಾಗಿ ಹಿಂಸಿಸಲಾಗುತ್ತಿದೆ. ಆರೋಗ್ಯ ಸಮಸ್ಯೆ ಇರುವ ಮಾತ್ರವಲ್ಲದೆ ಪತಿಗೂ ಕಳೆದ ಕೆಲ ತಿಂಗಳ ಹಿಂದೆ ಹೃದಯ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ಆಗಿರುವುದರಿಂದ ಅವರ ವಾಸಸ್ಥಳ ಹೆಜಮಾಡಿಯಿಂದ ವಿಟ್ಲಕ್ಕೆ ಹೋಗಿ ಬರುವುದು ಕಷ್ಟವಾಗಿದ್ದು, ಹೆಜಮಾಡಿ ಬಳಿಯ ಶಾಖೆಗೆ ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದರು. ನಮ್ಮ ಸಮಿತಿ ವತಿಯಿಂದಲೂ ಬ್ಯಾಂಕ್‌ನ ಅಧಿಕಾರಿಯನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಆದರೆ ಅವರ ಮನವಿಯನ್ನು ಪುರಸ್ಕರಿಸದೆ ಅವರು ಕೆಲಸ ಬಿಟ್ಟು ಹೋಗಲಿ ಎಂಬ ಉದ್ದೇಶದಿಂದಲೇ ಕಿರುಕುಳ ನೀಡಲಾಗಿದೆ. ಇದನ್ನು ವಿರೋಧಿಸಿ ಜು. 15ರಂದು ಬ್ಯಾಂಕ್‌ನ ಪ್ರಧಾನ ಕಚೇರಿ ಎದುರು ಬೆಳಗ್ಗೆ 10.30ಕ್ಕೆ ಪ್ರತಿಭಟನೆ ನಡೆಸುವುದಾಗಿ ಅವರು ಹೇಳಿದರು.
ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್, ಮಹಿಳಾ ಸಂಚಾಲಕಿ ಸರೋಜಿನಿ ಬಂಟ್ವಾಳ, ರಾಜಯ್ಯ ಮಂಗಳೂರು, ಕಮಲಾಕ್ಷ ಬಜಾಲ್, ಸುರೇಶ್ ಬೆಳ್ಳಾಯಾರ್ ಉಪಸ್ಥಿತರಿದ್ದರು.