25 ಗಂಟೆಗಳ ಕಾಲ ಯೋಗ ತರಬೇತಿ ಮ್ಯಾರಥಾನ್ ಯೋಗ ತರಬೇತಿ
ಮಂಗಳೂರು: ಯೋಗಕ್ಕೆ ಮಹತ್ವ ನೀಡುತ್ತಿರುವ ಯೇನೆಪೋಯ ಸಂಸ್ಥೆಯ ಕಾರ್ಯ ಶ್ಲಾಘನೀಯ. ವಿಶ್ವ ದಾಖಲೆಯತ್ತ ಮುಂದಾಗಿರುವ ಸಂಸ್ಥೆಯ ಕಾರ್ಯವೈಖರಿಗೆ ರಾಜೀವ್ ಗಾಂಧಿ ಆರೋಗ್ಯ ವಿ.ವಿ.ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಗಳ ಸಿಂಡಿಕೇಟ್ ಸದಸ್ಯ ಯು.ಟಿ. ಇಫ್ತಿಕಾರ್ ಆಲಿ ಹೇಳಿದರು.
ಅವರು ಯೇನೆಪೋಯ ವೈದ್ಯಕೀಯ ಕಾಲೇಜು ಬೆಳ್ಳಿ ಹಬ್ಬದ ಆಚರಣೆ ಪ್ರಯುಕ್ತ ದೇರಳಕಟ್ಟೆ ಯೇನೆಪೋಯ ಸ್ವಾಯತ್ತೆ ವಿ.ವಿ.ಯ ಎಂಡ್ಯುರೆನ್ಸ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾದ ಗೋಲ್ಡನ್ ಪುಸ್ತಕದ ವಿಶ್ವ ದಾಖಲೆಯಲ್ಲಿ ದಾಖಲಾಗಲಿರುವ ಯೋಗ ಶಿಕ್ಷಕ ಕುಶಾಲಪ್ಪ ಗೌಡ ಇವರಿಂದ ನಿರಂತರ 25 ಗಂಟೆಗಳ ಕಾಲ ಯೋಗ ತರಬೇತಿ ಮ್ಯಾರಥಾನ್ ಯೋಗ ತರಬೇತಿಯನ್ನು ಉದ್ಘಾಟಿಸಿದರು.
ಯೇನೆಪೋಯ ಸ್ವಾಯುತ್ತೆ ವಿ.ವಿ.ಯ ಆಡಳಿತ ಸಮಿತಿಯಿಂದ ಹಿಡಿದು ಅನೇಕರು ಕುಶಾಲಪ್ಪ ಗೌಡ ರಂತಹ ದೊಡ್ಡ ತರಬೇತುದಾರರಿಂದ ಯೋಗಾಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಜಗತ್ತಿಗೆ ಪ್ರಮುಖವಾದ ಯೋಗದ ಚಟುವಟಿಕೆಗಳಲ್ಲಿ ಯೆನೆಪೋಯ ಸಂಸ್ಥೆ ಇನ್ನಷ್ಟು ಬೆಳೆದು ನಿಲ್ಲಲಿ ಎಂದು ಹಾರೈಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಚೇತನ ಮತ್ತು ಯೋಗ ಜ್ಞಾನ ವಿಭಾಗದ ಪ್ರೊ. ಡಾ.ಕೆ. ಕೃಷ್ಣ ಶರ್ಮ ಮಾತನಾಡಿ, ಶಕ್ತಿಯ ವರ್ಗಾವಣೆಗೆ ಗುರುಗಳ ಅಗತ್ಯ. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ದೇಶ ಭಾರತ. ಇದೀಗ ಅಂತಹ ವಿದ್ಯೆಯಲ್ಲಿ ದಾಖಲೆ ನಿರ್ಮಿಸಲು ಹೊರಟಿರುವ ಕುಶಾಲಪ್ಪ ಗೌಡ ಮತ್ತವರ ತಂಡದ ಕಾರ್ಯ ಶ್ಲಾಘನೀಯ ಎಂದರು.
ಯೋಗ ತರಬೇತಿಯ ಫ್ಲ್ಯಾಗ್ ಆಫ್ ಅನ್ನು ಯೇನೆಪೋಯ ಸ್ವಾಯುತ್ತೆ ವಿ.ವಿ.ಯ ಕುಲಸಚಿವ ಡಾ. ಕೆ.ಎಸ್. ಗಂಗಾಧರ್ ಸೋಮಯಾಜಿ ನೆರವೇರಿಸಿ ಮಾತನಾಡಿ, ಓರ್ವನೇ ಸಾವಿರದಷ್ಟು ವಿದ್ಯಾರ್ಥಿಗಳನ್ನು ಏಕಕಾಲಕ್ಕೆ ತರಬೇತಿ ನೀಡುವುದು ಸಾಮಾನ್ಯದ ಕಾರ್ಯವಲ್ಲ. ಆದರೆ ಯೋಗಶಿಕ್ಷಕ ಕುಶಾಲಪ್ಪ ಗೌಡ ಅದನ್ನು ತೋರಿಸಿಕೊಟ್ಟಿದ್ದಾರೆ. ಇದು ಸಂಸ್ಥೆಗೆ ಹೆಮ್ಮೆಯನ್ನು ತಂದುಕೊಟ್ಟಿದೆ. ಇದೀಗ ವಿಶ್ವದಾಖಲೆಯತ್ತ ಮುಂದಾಗಿರುವುದು ಸಂಸ್ಥೆ ಗರಿಮೆ ಇನ್ನಷ್ಟು ಎತ್ತರಕ್ಕೆ ಏರಲಿದೆ ಎಂದರು.
ಯೇನೆಪೋಯ ಇಸ್ಲಾಮಿಕ್ ಟ್ರಸ್ಟ್ ನ ಟ್ರಸ್ಟೀ ಡಾ.ಅಖ್ತರ್ ಹುಸೈನ್, ವೈದ್ಯಕೀಯ ಕಾಲೇಜು ಡೀನ್ ಡಾ. ಎಂ.ಎಸ್. ಮೂಸಬ್ಬ, ಗೋಲ್ಡನ್ ವಿಶ್ವದಾಖಲೆ ಪುಸ್ತಕ ಸಮಿತಿಯ ಜಡ್ಜ್ ಆದ ಡಾ. ಮನೀಷ್ ವಿಷ್ಣೋಯ್, ಯೋಗ ತರಬೇತುದಾರ ಕುಶಾಲಪ್ಪ ಗೌಡ ಉಪಸ್ಥಿತರಿದ್ದರು. ಡಾ.ಅಶ್ವಿನಿ ಶೆಟ್ಟಿ ಸ್ವಾಗತಿಸಿದರು. ಡಾ. ಪ್ರಿಯ ನಿರೂಪಿಸಿದರು.