ಆ.5ರಂದು ಮುಖ್ಯಮಂತ್ರಿ ಮನೆ ಚಲೋ: ಕೆ. ಮಹಾಂತೇಶ್
ಮಂಗಳೂರು: ಕಟ್ಟಡ ಕಾರ್ಮಿಕರ ಮಕ್ಕಳಿಗೆ ರಾಜ್ಯ ಸರಕಾರ ಶೈಕ್ಷಣಿಕ ಸಹಾಯಧನ ಕಡಿತ ಮಾಡಿರುವ ಆದೇಶ ಹಿಂಪಡೆದು ಹೈಕೋರ್ಟ್ ಆದೇಶದಂತೆ ಸರಕಾರ ಶೈಕ್ಷಣಿಕ ಧನ ಸಹಾಯ ಬಿಡುಗಡೆ ಮಾಡಬೇಕು. 2022-23-24 ಸಾಲಿನ ಬಾಕಿ ಅರ್ಜಿಗಳಿಗೂ ಧನ ಸಹಾಯ ಪಾವತಿಸಬೇಕು ಸೇರಿದಂತೆ 7 ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಆಶ್ರಯದಲ್ಲಿ ಆ.5ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮನೆ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಫೆಡರೇಶನ್‌ನ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಟ್ಟಡ ನೈಜ ಕಾರ್ಮಿಕರ ನೋಂದಣಿ ಮತ್ತು ಮರು ನೋಂದಣಿ ಅರ್ಜಿಗಳನ್ನು ಸಕಾರಣವಿಲ್ಲದೇ ತಿರಸ್ಕರಿಸುವುದು ನಿಲ್ಲಬೇಕು ಹಾಗೂ ವಿಳಂಬ ಮಾಡದೇ ಕಾರ್ಡು ವಿತರಣೆ ಯಾಗಬೇಕು, ಸೌಲಭ್ಯಗಳಿಗಾಗಿ ಸಲ್ಲಿಸಿರುವ ಸಾವಿರಾರು ಅರ್ಜಿಗಳು ಇನ್ನೂ ವಿಲೇವಾರಿ ಆಗಿಲ್ಲ. ಇವುಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು ಎಂದರು.
ಈ ಚಳವಳಿಯಲ್ಲಿ 10 ಸಾವಿರಕ್ಕೂ ಮಂದಿ ಕಟ್ಟಡ ಕಾರ್ಮಿಕರು ಭಾಗವಹಿಸಲಿದ್ದಾರೆ. ದ.ಕ. ಜಿಲ್ಲೆಯಿಂದ ಸುಮಾರು 500 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಕೆ. ಮಹಾಂತೇಶ್ ಮಾಹಿತಿ ನೀಡಿದರು.
ನೊಂದಣಿ, ನವೀಕರಣ ಹಾಗೂ ವಿವಿಧ ಸೌಲಭ್ಯಗಳಿಗೆ ಅರ್ಜಿ ಹಾಕಲು ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಮಂಡಳಿ ತಂತ್ರಾಂಶದಲ್ಲಿ ಪದೇ ಪದೇ ಉಂಟಾಗುತ್ತಿರುವುದರಿಂದ ಶೈಕ್ಷಣಿಕ ಧನ ಸಹಾಯ, ಮದುವೆ, ವೈದ್ಯಕೀಯ, ಹೆರಿಗೆ, ಪಿಂಚಣಿ ಮೊದಲಾದ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಸಲ್ಲಿಸಲಾದ ಸಾವಿರಾರು ಫಲಾನುಭವಿಗಳಿಗೆ ಧನ ಸಹಾಯ ಪಾವತಿ ಸರಿಯಾಗಿ ಆಗುತ್ತಿಲ್ಲ, ಶೈಕ್ಷಣಿಕ ಧನ ಸಹಾಯವನ್ನು ಶೇ.60 ರಿಂದ 80 ರವರೆಗೆ ಕಡಿತ ಮಾಡಿರುವುದರಿಂದ ಸಾವಿರಾರು ಬಡ ಕಟ್ಟಡ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಆಪಾಯ ಎದುರಾಗಿದೆ. ಕಲ್ಯಾಣ ಮಂಡಳಿಯು ಶೈಕ್ಷಣಿಕ ಧನ ಸಹಾಯ ಕಡಿತ ಮಾಡಿದ್ದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಷನ್ ಹೈಕೋರ್ಟ್ನಲ್ಲಿ ಅರ್ಜಿ ಹಾಕಿ ಇಬ್ಬರು ಬಡ ಕಾರ್ಮಿಕರ ಮಕ್ಕಳಿಗೆ ದಂಡ ಸಹಿತ ಧನ ಸಹಾಯ ಕೊಡಿಸಲು ಸಾಧ್ಯವಾಗಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ವಸಂತ ಆಚಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಜಿಲ್ಲಾ ಖಜಾಂಚಿ ರವಿಚಂದ್ರ ಕೊಂಚಾಡಿ, ಉಪಾಧ್ಯಕ್ಷ ಬಿ.ಜಿ.ಅಗಸ್ಟಿನ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.