Mangalore: ಸ್ವಚ್ಛತೆ, ಧಾರ್ಮಿಕ, ಸಾಮಾಜಿಕ ಚಿಂತನೆಯಲ್ಲಿ ಮಾದರಿ: ಶಾಸಕ ವೇದವ್ಯಾಸ ಕಾಮತ್
ಮಂಗಳೂರು: ಸ್ವಚ್ಛತೆ, ಧಾರ್ಮಿಕ, ಸಾಮಾಜಿಕ ಸೇವಾ ಚಿಂತನೆ ಈ ಮೂಲಕ ಬಡಾವಣೆಯಲ್ಲಿ ಸೌಹಾರ್ಧತೆಯ ವಾತಾವರಣದೊಂದಿಗೆ ದತ್ತನಗರ ನಿವಾಸಿಗಳ ಸಂಘ ಇತರ ಸಂಘ ಸಂಸ್ಥೆಗಳಿಗೆ ಪ್ರೇರಣೆಯಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಭಾನುವಾರ ದತ್ತನಗರದಲ್ಲಿ ನಿವಾಸಿಗಳ ಸಂಘವು ಯೋಜಿಸಿದ್ದ ಆಟಿಡೊಂಜಿ ದಿನ, ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸ್ಥಳೀಯ ಸಂಸ್ಥೆಗಳ ಸ್ವಚ್ಚತೆಯ ಕೆಲಸವನ್ನು ಇಲ್ಲಿನ ಬಡಾವಣೆಯ ನಿವಾಸಿಗಳು ತಾವೇ ಮಾಡುವ ಮೂಲಕ ಮೇಲ್ಪಂಕ್ತಿಯಲ್ಲಿದ್ದಾರೆ. ಇದರ ಜತೆಗೆ ಜತೆಯಾಗಿ ಆಟಿಡೊಂಜಿ ದಿನದಂತಹ ಧಾರ್ಮಿಕ, ರಾಷ್ಟ್ರೀಯ, ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.
ದಿಕ್ಸೂಚಿ ಉಪನ್ಯಾಸ ನೀಡಿದ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಅವರು ಆಟಿ ದಿನದ ಪರಿಕಲ್ಪನೆ ಜೀವನ ಪದ್ದತಿ ಆಂದಿನ ದಿನಕ್ಕೆ, ವಾತಾವರಣಕ್ಕೆ ಅನುಗುಣವಾಗಿ ಅಳವಡಿಸಿಕೊಂಡಿದ್ದರು. ಆರೋಗ್ಯ ಪೂರ್ಣ ಜೀವನಕ್ಕೆ ಮಳೆಗಾಲದ ಆಟಿ ಜೀವನ ಪೂರಕವಾಗಿತ್ತು. ಪೂರ್ವಜರು ಆಚರಿಸಿಕೊಂಡು ಬರುತ್ತಿದ್ದ ಬಗೆಯನ್ನು ಮನ ಮುಟ್ಟುವಂತೆ ವಿವರಿಸಿ ನಮ್ಮ ಮಕ್ಕಳಿಗೆ ಇಂತಹ ಪರಿಸರ ಸ್ನೇಹಿ ಜೀವನ ಪದ್ದತಿಯನ್ನು ಕಲಿಸಬೇಕಿದೆ ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಶುಭ ಹಾರೈಸಿದರು. ಚೆನ್ನ ಮಣೆ ಆಟದ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಾಧಕರಿಗೆ ಸಮ್ಮಾನ ಹಾಗೂ ರಸಪ್ರಶ್ನೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.
ಎಚ್.ಕೆ ಪುರುಷೋತ್ತಮ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಅಧ್ಯಕ್ಷ ಹರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು.
ಮನಪಾ ಸದಸ್ಯರಾದ ವನಿತ ಪ್ರಸಾದ್, ಶಕೀಲ ಕಾವಾ, ಸಂಘದ ಕೋಶಾಧಿಕಾರಿ ಸತೀಶ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಹರೀಶ್ ಭಂಡಾರಿ ವಂದಿಸಿ, ಪ್ರವೀಣ್ ಶೆಟ್ಟಿ ಮತ್ತು ಮಂಜುಳಾ ಶೆಟ್ಟಿ ನಿರೂಪಿಸಿದರು.