Mangalore: ಬಲ್ಮಠ ಕಟ್ಟಡ ಕಾಮಗಾರಿ ವೇಳೆ ಭೂ ಕುಸಿತ-ಆಯುಕ್ತರ ಮೇಲೆ ಕ್ರಮಕ್ಕೆ ಒತ್ತಾಯ: ಡಿವೈಎಫ್‌ಐ

Mangalore: ಬಲ್ಮಠ ಕಟ್ಟಡ ಕಾಮಗಾರಿ ವೇಳೆ ಭೂ ಕುಸಿತ-ಆಯುಕ್ತರ ಮೇಲೆ ಕ್ರಮಕ್ಕೆ ಒತ್ತಾಯ: ಡಿವೈಎಫ್‌ಐ

ಮಂಗಳೂರು: ಬಲ್ಮಠ ಕಟ್ಟಡ ಸಂಕೀರ್ಣದ ಕಾಮಗಾರಿ ವೇಳೆ ತಳಪಾಯದ ತಡೆಗೋಡೆ ಪಕ್ಕ ಕುಸಿದ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ ಉತ್ತರ ಪ್ರದೇಶದ ಕಾರ್ಮಿಕನ ಸಾವಿಗೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ನೇರಹೊಣೆಯಾಗಲಿದ್ದಾರೆ. ಇಂತಹ ದುರ್ಘಟನೆ ಸಂಭವಿಸಿದ ನಂತರವಷ್ಟೇ ಕಾಮಗಾರಿಗಳ ನಿಲ್ಲಿಸಲು ಸೂಚನೇ ನೀಡುವುದು ಆಡಳಿತದ ಬೇಜವಾಬ್ದಾರಿಯ ಪರಮಾವಧಿ. ಪಾಲಿಕೆಯ ನಿಯಮಗಳನ್ನು ಮೀರಿ ನಡೆಯುವ ಕಾಮಗಾರಿಯನ್ನು ನಿಲ್ಲಿಸಲು ಕ್ರಮಕೈಗೊಳ್ಳದ ಮ.ನ.ಪಾ ಆಯುಕ್ತರ ವಿರುದ್ದ ಸರಕಾರ ಮತ್ತು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಪ್ರಾಣ ಕಳೆದುಕೊಂಡ ಕಾರ್ಮಿಕನಿಗೆ ಗರಿಷ್ಟ ಪ್ರಮಾಣದ ಆರ್ಥಿಕ ಪರಿಹಾರ ನೀಡಬೇಕೆಂದು ಡಿವೈಎಫ್‌ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.

ಮಂಗಳೂರು ನಗರದಲ್ಲಿಂದು ತಲೆ ಎತ್ತುತ್ತಿರುವ ಬಹುಮಹಡಿ ವಸತಿ ಸಮುಚ್ಚಯ ಮತ್ತು ವಾಣಿಜ್ಯ ಸಂಕೀರ್ಣಗಳ ನಿರ್ಮಾಣಕ್ಕಾಗಿ ಪಾಲಿಕೆಯಿಂದ ಪರವಾನಿಗೆ ಪಡೆದ ಕಟ್ಟಡ ನಿರ್ಮಾಣದಾರರು ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದೆ ಅವೈಜ್ಞಾನಿಕವಾಗಿ ನಡೆಸುವ ಕಾಮಗಾರಿಗಳಿಂದ ಭೂಕುಸಿತ ಸಂಭವಿಸುತ್ತಿದೆ. ನಿನ್ನೆ ನಡೆದ ದುರಂತ ಇದು ಮೊದಲೂ ಅಲ್ಲ ಕೊನೆಯದೂ ಅಲ್ಲ. ಈ ರೀತಿಯ ಘಟನೆ ಪ್ರತೀ ಬಾರಿಯೂ ನಡೆದಾಗ ಮಾತ್ರ ಮಂಗಳೂರು ನಗರ ಪಾಲಿಕೆ ಆಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾಡಳಿತ ಎಚ್ಚರಗೊಳ್ಳುತ್ತದೆ. ಮತ್ತು ಕೆಲವೊಂದು ಮುಂಜಾಗ್ರತಾ ಕ್ರಮಗಳಿಗೆ ಆದೇಶ ಹೊರಡಿಸುತ್ತದೆಯೇ ಹೊರತು ಅದನ್ನು ಮುಂದೆಯೂ ಪಾಲಿಸುವ ಕ್ರಮಗಳ ಬಗ್ಗೆ ಎಚ್ಚರ ವಹಿಸೋದೇ ಇಲ್ಲ. ಮಳೆಗಾಲದ ವೇಳೆ ಸುಮಾರು 10 ಅಡಿ ಆಳಕ್ಕಿಂತ ಜಾಸ್ತಿಯ ಗುಂಡಿ ಅಗೆದು ಕಟ್ಟಡ ಕಾಮಗಾರಿಗಳನ್ನು ನಡೆಸಬಾರದೆಂಬ ಕಟ್ಟಡ ನಿರ್ಮಾಣ ಕುರಿತು (ಗೈಡ್ ಲೈನ್)  ನಿಯಮಗಳಿದ್ದರೂ ಅದನ್ನು ಪಾಲಿಸಲು ಕ್ರಮಕೈಗೊಳ್ಳದೇ ಇರೋದು ಪಾಲಿಕೆ ಆಡಳಿತದ ಬೇಜಾವ್ದಾರಿಯಲ್ಲದೆ ಮತ್ತಿನ್ನೇನು ಅಲ್ಲ. ಘಟನೆ ನಡೆದ ತಕ್ಷಣ ಅಥವಾ ಈವರೆಗೂ ಕಾಮಗಾರಿ ಗುತ್ತಿಗೆದಾರನ ಮೇಲಾಗಲಿ ಮತ್ತು ಇಂಜನೀಯರ್ ಮೇಲೆ ಕ್ರಮಕೈಗೊಳ್ಳಲು ಮುಂದಾಗಿಲ್ಲ. ಮಳೆಗಾಲದಲ್ಲಿ ಖಾಸಗೀ ಕಟ್ಟಡಗಳ ಕಾಮಗಾರಿ ಬಿಡಿ ಪಾಲಿಕೆಯ ನೇತೃತ್ವದಲ್ಲೇ ಕಾಮಗಾರಿಗಳು ನಡೆಯುತ್ತಿದ್ದು ಇತ್ತೀಚೇಗೆ ಅಳಕೆ ರಾಜಕಾಲುವೆ ತಡೆಗೋಡೆ ಕುಸಿದಿರುವ ಘಟನೆ ಇನ್ನು ಕಣ್ಣ ಮುಂದೆ ಇದೆ. ಇನ್ನೊಂದು ಜಲಸಿರಿ ಯೋಜನೆಯಿಂದ ಅಲ್ಲಲ್ಲಿ ರಸ್ತೆ ನಡುವೆ ಗುಂಡಿ ಅಗೆದು ನಡೆಸುವ ಕಾಮಗಾರಿಗಳು ಇದಕ್ಕೆ ಅನ್ವಯಿಸುತ್ತಿಲ್ಲವೇ ಎಂದು ಪಾಲಿಕೆ ಆಡಳಿತ ಉತ್ತರಿಸಬೇಕು. ಖಾಸಗೀ ಬಹುಮಹಡಿ ಕಟ್ಟಡಗಳು ಮಂಗಳೂರು ಮಹಾನಗರ ಪಾಲಿಕೆಯ ನಿಯಮಗಳನ್ನು ಪಾಲಿಸದೆ ಬಡ ಕಾರ್ಮಿಕರನ್ನು ಅಪಾಯ ಪರಿಸ್ಥಿತಿಗೆ ತಂದೊಡ್ಡಿ ನಿರ್ಮಿಸುತ್ತಿರುವ ಅವೈಜ್ಞಾನಿಕ ಕಟ್ಟಡ ಕಾಮಗಾರಿಗಳಿಂದ ದುರಂತ ನಡೆದು ಕಾರ್ಮಿಕರು ಪ್ರಾಣ ಕಳೆದುಕೊಳ್ಳುವಂತೆ ಮಾಡುವಲ್ಲಿ ಪಾಲಿಕೆ ಆಯುಕ್ತರೇ ನೇರ ಹೊಣೆಯಾಗಲಿದ್ದಾರೆ. 

ಈ ಹಿನ್ನಲೆಯಲ್ಲಿ ಸರಕಾರ, ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಜಿಲ್ಲಾಡಳಿತ ಈ ಕೂಡಲೇ ಎಚ್ಚೆತ್ತು  ಕಟ್ಟಡ ಕಾಮಗಾರಿ ಕುಸಿತದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೆ ಒಳಪಡಿಸಬೇಕು. ಪಾಲಿಕೆಯ ನಿಯಮಗಳನ್ನು ಮೀರಿ ನಡೆಯುವ ಕಾಮಗಾರಿಯನ್ನು ನಿಲ್ಲಿಸಲು ಕ್ರಮಕೈಗೊಳ್ಳದ ಮ.ನ.ಪಾ ಆಯುಕ್ತರ ವಿರುದ್ದ ಮತ್ತು ಗುತ್ತಿಗೆದಾರ, ಇಂಜಿನೀಯರ್ ವಿರುದ್ಧ  ಸೂಕ್ತ ಕ್ರಮಕೈಗೊಳ್ಳಬೇಕು. ಹಾಗೂ ಪ್ರಾಣ ಕಳೆದುಕೊಂಡ ಕಾರ್ಮಿಕನಿಗೆ ಗರಿಷ್ಟ ಪ್ರಮಾಣದ ಆರ್ಥಿಕ ಪರಿಹಾರ ಒದಗಿಸಿಕೊಡಬೇಕೆಂದು ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article