Mangalore: ಜನಸಂಖ್ಯಾ ಹೆಚ್ಚಳದಿಂದ ಮೂಲ ಸೌಕರ್ಯಗಳ ಮೇಲೆ ಒತ್ತಡ: ಡಾ. ಎಚ್.ಆರ್ ತಿಮ್ಮಯ್ಯ

Mangalore: ಜನಸಂಖ್ಯಾ ಹೆಚ್ಚಳದಿಂದ ಮೂಲ ಸೌಕರ್ಯಗಳ ಮೇಲೆ ಒತ್ತಡ: ಡಾ. ಎಚ್.ಆರ್ ತಿಮ್ಮಯ್ಯ


ಮಂಗಳೂರು: ಭಾರತವು ವಿಶ್ವದ ಅತ್ಯಧಿಕ ಜನಸಂಖ್ಯೆಯುಳ್ಳ ದೇಶವಾಗಿದ್ದು, ಇದರಿಂದ ದೇಶದೊಳಗಿನ ಸಂಪನ್ಮೂಲಗಳ ಮೇಲೆ ಅತೀವ ಒತ್ತಡ ಬೀರುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ ಹೇಳಿದ್ದಾರೆ.  

ಗುರುವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಕಛೇರಿ,  ಮಂಗಳೂರಿನ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಘಟಕದ  ವತಿಯಿಂದ ಕೆಪಿಟಿ ಸಭಾಂಗಣದಲ್ಲಿ ಇಂದು ನಡೆದ ಮಂಗಳೂರು ತಾಲೂಕು ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನೈಸರ್ಗಿಕ ಸಂಪನ್ಮೂಲಗಳು ಸೀಮಿತವಾಗಿದೆ. ಇರುವ ಸಂಪನ್ಮೂಲಗಳೇ ಹೆಚ್ಚುತ್ತಿರುವ ಜನಸಂಖ್ಯೆಗೆ ಬಳಕೆಯಾಗುತ್ತಿವೆ. ಬೆಟ್ಟ, ಗುಡ್ಡ, ಕಾಡು ನಾಶವಾಗಿ ಜನವಸತಿ ಪ್ರದೇಶವಾಗಿ ಏರ್ಪಾಡಾಗುತ್ತಿವೆ. ಇದರಿಂದ ನೈಸರ್ಗಿಕ ಅಸಮತೋಲನ ಉಂಟಾಗಿ ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುತ್ತಿದೆ. ಕಳೆದ ಕೆಲವು ವರ್ಷದಿಂದ ಭೂಕುಸಿತಗಳು ನಿರಂತರವಾಗಿ ನಡೆಯುತ್ತಿವೆ. ಹರಿಯುವ ನದಿಗಳ ಪಥ ಬದಲಾವಣೆಯಾಗುತ್ತಿದೆ. ಬಹುಮಹಡಿ ಕಟ್ಟಡಗಳು ಏರಿಕೆಯಾಗುತ್ತಿವೆ, ಇದು ಜನಸಂಖ್ಯಾ ಹೆಚ್ಚಳದ ಪರಿಣಾಮಗಳಾಗಿವೆ ಎಂದು ಅವರು ತಿಳಿಸಿದರು.

ಮಂಗಳೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ಮಹೇಶ್ ಹೊಳ್ಳ ಮಾತನಾಡಿ ಜನಸಂಖ್ಯಾ ಏರಿಕೆಯು ಪರಿಸರದ ಮೇಲೆ ಅತೀವ ಪರಿಣಾಮ ಬೀರಿದೆ, ಜನರು ಪರಿಸರ ನಾಶಕ್ಕೆ ಕಾರಣವಾಗುವ ಚಟುವಟಿಕೆಗಳನ್ನು ವಿಪರೀತ ಮಾಡುತ್ತಿದ್ದಾರೆ ಎಂದು ಹೇಳಿದರು.

ಕೆ.ಪಿ.ಟಿ ಪ್ರಾಂಶುಪಾಲ ಹರೀಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಅಧೀಕ್ಷಕ  ಡಾ. ಜೆಸಿಂತಾ ಡಿ. ಸೋಜಾ, ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಜಯ್ ಭಂಡಾರಿ, ಮಂಗಳೂರು ತಾಲೂಕು ಉಪ ತಹಶಿಲ್ದಾರ್ ಜಯಂತ್, ಸುರತ್ಕಲ್ ಜಿಲ್ಲಾ ತರಬೇತಿ ಕೇಂದ್ರ ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್, ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ  ವೈದ್ಯಕೀಯ ಅಧೀಕ್ಷಕ, ಡಾ. ದುರ್ಗಾಪ್ರಸಾದ್, ಕಾರ್ಸ್ಟ್ರೀಟ್ ಪ್ರಥಮ ದರ್ಜೆ ಕಾಲೇಜು ಪ್ರಾದ್ಯಾಪಕ ದೇವಿಪ್ರಸಾದ್  ಉಪಸ್ಥಿತರಿದ್ದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ದೀಪಾ ಪ್ರಭು ಸ್ವಾಗತಿಸಿದರು, ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಸತೀಶ್ ಕೆ.ಎಂ ವಂದಿಸಿದರು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಉಳೆಪಾಡಿ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article