
Mangalore: ಧರೆ ಕುಸಿದು ಮಣ್ಣಿನಡಿ ಸಿಲುಕಿದ ಕಾರ್ಮಿಕರು-ಒಬ್ಬರ ರಕ್ಷಣೆ
ಮಂಗಳೂರು: ಕಟ್ಟಡ ನಿರ್ಮಾಣದ ವೇಳೆ ಧರೆ ಕುಸಿದು ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ನಗರದ ಬಲ್ಮಠ ರೋಡ್ ಸಮೀಪ ಇಂದು ಮಧ್ಯಾಹ್ನ ನಡೆದಿದೆ.
ಬಿಹಾರ ಮೂಲದ ರಾಜ್‌ಕುಮಾರ್(18) ಹಾಗೂ ಉತ್ತರ ಪ್ರದೇಶದ ಚಂದನ್(30) ಮಣ್ಣಿನಡಿ ಸಿಲುಕಿದ್ದು, ರಾಜ್‌ಕುಮಾರ್‌ರನ್ನು ರಕ್ಷಣಾ ಕಾರ್ಯಾಚರಣೆ ಮೂಲಕ ಹೊರತೆಗೆಯಲಾಗಿದೆ. ಚಂದನ್ ರಕ್ಷಣಾ ಕಾರ್ಯ ಮುಂದುವರೆದಿದೆ
ಇಲ್ಲಿ ಸುಮಾರ್ 60ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್ ಉಳಿದ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.
ಬಲ್ಮಠದಲ್ಲಿ ಬಿಲ್ಡರ್‌ರೊಬ್ಬರಿಗೆ ಸೇರಿದ ಬೃಹತ್ ವಾಣಿಜ್ಯ ಕಟ್ಟಡವೊಂದು ನಿರ್ಮಾಣ ಹಂತದಲ್ಲಿದೆ. ಈ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಸುಮಾರು 20 ಅಡಿ ಆಳದಲ್ಲಿ ಕಾಂಕ್ರಿಟ್ ಕಾಮಗಾರಿ ನಡೆಸುತ್ತಿದ್ದ ವೇಳೆ ಏಕಾಏಕಿ ಮೇಲ್ಭಾಗದ ಒಂದು ಪಾರ್ಶ್ವದಿಂದ ಧರೆ ಕುಸಿದಿದೆ. ಈ ವೇಳೆ ಅಡಿಭಾಗದಲ್ಲಿ ಕೆಲಸ ಮಾಡುತ್ತಿದ್ದ ರಾಜ್‌ಮಾರ್ ಮತ್ತು ಚಂದನ್ ಮೇಲೆ ಮಣ್ಣು ರಾಶಿ ಬಿದ್ದಿದ್ದು, ಅವರು
ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಅರ್ಧ ಗಂಟೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ, ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ಕೈಗೊಂಡಿದೆ. ಮಧಾಹ್ನ 2.45ರ ಸುಮಾರಿಗೆ ರಾಜ್‌ಕುಮಾರ್‌ರನ್ನು ರಕ್ಷಿಸಿ ಕಂಕನಾಡಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನೋರ್ವ ಕಾರ್ಮಿಕ ಚಂದನ್ನ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಿಂದಾಗಿ ಅಪರಾಹ್ನ ಪೂರ್ತಿ ಬಲ್ಮಠದಲ್ಲಿ ವಾಹನ ಸಂಚಾರಕ್ಕೆ ತಡೆಯಾಗಿತ್ತು.
ಮಳೆಯಿಂದ ಕಾರ್ಯಾಚರಣೆಗೆ ತೊಡಕು..
ಒಂದೆಡೆ ತಡೆಗೋಡೆ ಮತ್ತೊಂದೆಡೆ ಹಸಿ ಮಣ್ಣು ಭಾರೀ ಪ್ರಮಾಣದಲ್ಲಿ ಕುಸಿದಿರುವ ಜತೆಗೆ ಮಳೆಯಿಂದ ಕಾರಣ ರಕ್ಷಣಾ ಕಾರ್ಯಕ್ಕೆ ಭಾರೀ ತೊಡಕಾಯಿತು. ಎಸ್‌ಡಿಆರ್‌ಎಫ್ ಸಿಬ್ಬಂದಿ ತಮ್ಮ ಕಾಂಕ್ರೀಟ್ ತಡೆಗೋಡೆ ಕತ್ತರಿಸುವ ಯಂತ್ರಗಳ ಮೂಲಕ ರಂದ್ರ ಕೊರೆದು ಆರಂಭದಲ್ಲಿ ಕಾರ್ಮಿಕರಿಗೆ ಆಮ್ಲಜನಕ ಹಾಗೂ ನೀರು ಒದಗಿಸುವ ಪ್ರಯತ್ನ ನಡೆಸಿದರು. ಇನ್ನೊಂದೆಡೆಯಲ್ಲಿ ಮಣ್ಣನ್ನು ಯಾಂತ್ರಿಕವಾಗಿ ತೆಗೆಯುವ ಕಾರ್ಯ ನಡೆಸಲಾಯಿತು. ಕಾಂಕ್ರೀಟ್ ಗೋಡೆಯನ್ನು ಯಂತ್ರಗಳ ಮೂಲಕ ಕೊರೆದು, 2.45ರ ಸುಮಾರಿಗೆ ರಾಜ್ ಕುಮಾರ್‌ನನ್ನು ಮಣ್ಣಿನಿಂದ ಹೊರತೆಗೆಯುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾದರು. ಅದಾಗಲೇ ಪುತ್ತೂರಿನಲ್ಲಿ ಬೀಡು ಬಿಟ್ಟಿರುವ ಎನ್‌ಡಿಆರ್‌ಎಫ್ ತಂಡದಿಂದ ಬೃಹತ್ತಾದ ಬಂಡೆ ಕೊರೆಯುವ ಯಂತ್ರವನ್ನು ತರಿಸಿ ಕಾರ್ಯಾಚರಣೆ ಆರಂಭಿಸಲಾಯಿತು. ಮಣ್ಣಿನಲ್ಲಿ ಹುದುಗಿರುವ ಚಂದನ್‌ನ ತಲೆ ಮತ್ತು ಕೈಗಳು ಕಾಣುತ್ತಿದ್ದು, ಅತನ ರಕ್ಷಣೆಗೆ 6 ತಾಸಿಗೂ ಅಧಿಕ ಕಾಲದಿಂದ ಕಾರ್ಯಾಚರಣೆ ಮುಂದುವರಿದಿದೆ.
24 ಕಾರ್ಮಿಕರ ತಂಡ ಮಂಗಳೂರಿನ ಕೊಟ್ಟಾರದ ಮಾಲೆಮಾರ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ಕಳೆದ ಸುಮಾರು ಏಳು ವರ್ಷಗಳಿಂದ ನಾವು ಈ ಕಾರ್ಯಕ್ಕಾಗಿ ಮಂಗಳೂರಿನಲ್ಲಿದ್ದೇವೆ. ನಾವೆಲ್ಲ ಬಿಹಾರ, ಉತ್ತರ ಪ್ರದೇಶದವರಾಗಿದ್ದು, ಕಟ್ಟಡ ಅಥವಾ ಮನೆ ನಿರ್ಮಾಣದ ವೇಳೆ ಈ ಕಾರ್ಯಕ್ಕೆ ನಮ್ಮ ಮೇಲಿನ ಮೇಸ್ತ್ರಿ ಕಡೆಯಿಂದ ಕರೆ ಬಂದಾಗ ತೆರಳುತ್ತೇವೆ. ಚಂದನ್ ಹಾಗೂ ರಾಜ್ ಕುಮಾರ್ ಬುಧವಾರದಿಂದ ಬಲ್ಮಠದಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದರು. ಮಧ್ಯಾಹ್ನ 1 ಗಂಟೆಯ ವೇಳೆಗೆ ಕರೆ ಬಂದು ಅವರಿಬ್ಬರು ಮಣ್ಣಿನಡಿ ಸಿಲುಕಿದ್ದಾರೆ ಎಂದಾಗ ಆಘಾತವಾಯಿತು. ನಾನು ನಂತೂರಿನಲ್ಲಿ ಕೆಲಸದಲ್ಲಿದ್ದು ನೇರವಾಗಿ ಇಲ್ಲಿಗೆ ಬಂದೆ. ಚಂದನ್ ಇನ್ನೂ ಮಣ್ಣಿನಡಿಯೇ ಇದ್ದಾರೆ. ಕಳೆದ ಎಪ್ರಿಲ್‌ನಲ್ಲಿ ಚಂದನ್ ತಂಗಿಯ ವಿವಾಹಕ್ಕೆ ನಾವೆಲ್ಲಾ ಊರಿಗೆ ಹೋಗಿ 20 ದಿನಗಳ ಹಿಂದಷ್ಟೇ ಮಂಗಳೂರಿಗೆ ಬಂದಿದ್ದೆವು. ಆತನಿಗೆ ಪತ್ನಿ, ಇಬ್ಬರು ಪುಟ್ಟಮಕ್ಕಳಿದ್ದಾರೆ ಎಂದು ಚಂದನ್ ಸಂಬಂಧಿ ಪಾಪು ಬೈತ ಎಂಬವರು ತಿಳಿಸಿದ್ದಾರೆ.
‘ರಾಜ್ ಕುಮಾರ್ ಕಳೆದ ಮೂರು ತಿಂಗಳ ಹಿಂದಷ್ಟೇ ನಮ್ಮ ಜತೆ ಬಂದಿದ್ದ. ಊರಲ್ಲಿ ಆತ ಕೂಲಿ ಕೆಲಸ ಮಾಡುತ್ತಿದ್ದು, ಮಾನಸಿಕವಾಗಿ ಅಸ್ವಸ್ಥರಾಗಿರುವ ತಂದೆ ಹಾಗೂ ತಾಯಿಯನ್ನು ನೋಡಿಕೊಳ್ಳುತ್ತಿದ್ದಾನೆ. ಬಂದು ಕೆಲ ಸಮಯದಲ್ಲೇ ಇಂತಹ ದುರ್ಘಟನೆ ಆಗಿದೆ. ಸದ್ಯ ಆತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಇನ್ನು ಸುಮಾರು ಮೂರು ತಿಂಗಳು ವಿಶ್ರಾಂತಿ ಬೇಕು ಎಂದು ವೈದ್ಯರು ಹೇಳಿದ್ದಾರೆ’ ಎಂದು ರಾಜ್ ಕುಮಾರ್ ಸಂಬಂಧಿ ಭುಲನ್ ಸಿಂಗ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್ ಕುಮಾರ್, ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ, ಆಯುಕ್ತ ಆನಂದ್, ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್, ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್, ದಿನೇಶ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಮತ್ತಿತರರು ಭೇಟಿ ನೀಡಿದ್ದಾರೆ.