
Mangalore: ಕರಾವಳಿ ಪ್ರವಾಸೋದ್ಯಮ ಆಕರ್ಷಣೆಗೆ ಈವೆಂಟ್ ಕ್ಯಾಲೆಂಡರ್ ಬಿಡುಗಡೆ
ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ, ಕರಾವಳಿ ಕರ್ನಾಟಕದಲ್ಲಿ ಪ್ರವಾಸಿಗರನ್ನು ಸರ್ವಋತುವಿನಲ್ಲಿಯೂ ಆಕರ್ಷಿಸಲು ಜಿಲ್ಲೆಯಲ್ಲಿ ನಡೆಯುವ ಪ್ರಮುಖ ಉತ್ಸವ, ಕಾರ್ಯಗಳ ಮಾಹಿತಿಗಳನ್ನೊಳಗೊಂಡ ಈವೆಂಟ್ ಕ್ಯಾಲೆಂಡರನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ಗುಂಡೂರಾವ್ ನಗರದಲ್ಲಿ ಇಂದು ಬಿಡುಗಡೆಗೊಳಿಸಿದರು.
ಕೋಸ್ಟಲ್ ಕರ್ನಾಟಕ ಟೂರಿಸಂ ಡೆವಲಪ್‌ಮೆಂಟ್ ಕೌನ್ಸಿಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು ಈವೆಂಟ್ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಇದು ಮೊದಲ ಹೆಜ್ಜೆಯಾಗಿದ್ದು ಗೋವಾ ಕೇರಳದಂತೆ ಇಲ್ಲಿಯೂ ಕೂಡ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದೆ ಎಂದರು.
ವೆಬ್ ಪೋರ್ಟಲ್ ಮೂಲಕ ಮಂಗಳೂರಿನ ಪ್ರವಾಸೋದ್ಯಮವನ್ನು ವಿಭಿನ್ನವಾಗಿ ತೋರಿಸಲಾಗಿದೆ.ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದೇ ಇದ್ದಾಗ ಪ್ರವಾಸೋದ್ಯಮ ಬೆಳವಣಿಗೆ ಹೊಂದುತ್ತದೆ .ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಿದೆ.ಈ ನಿಟ್ಟಿನಲ್ಲಿ ಖಾಸಗೀ ಹೂಡಿಕೆಗಳಿಗೂ ಸರಕಾರ ಪೂರಕವಾಗಿ ಸ್ಪಂದಿಸಲಿದೆ ಎಂದು ತಿಳಿಸಿದರು.
ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ, ವೆಬ್ ಪೋರ್ಟಲ್‌ಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಇದೊಂದು ಉತ್ತಮ ಹೆಜ್ಜೆಯಾಗಿದೆ. ಈ ಮೂಲಕ ಹೊg ಜಗತ್ತಿಗೆ ಜಿಲ್ಲೆಯ ಸಂಸ್ಕೃತಿ, ವೈವಿಧ್ಯಮಯ ಚಟುವಟಿಕೆಗಳನ್ನು ಪರಿಚಯಿಸಲು ಸಹಕಾರಿಯಾಗಲಿದೆ. ಕೇಂದ್ರ ಸರಕಾರದಿಂದಲೂ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಪ್ರಯತ್ನಿಸುವುದಾಗಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಕೌನ್ಸಿಲ್ ಮತ್ತು ಜಿಲ್ಲಾಡಳಿತ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಅಭಿವೃದ್ಧಿಪಡುಸುವ ಗುರಿಯನ್ನು ಹೊಂದಿದೆ.ಇದರಲ್ಲಿ ಸರಕಾರ, ಸ್ಥಳಿಯ ಉದ್ಯಮಗಳು, ಪ್ರವಾಸೋದ್ಯಮ ತಜ್ಞರು, ವಿವಿಧ ಕ್ಷೇತ್ರಗಳ ಅನುಭವಿಗಳು ಇರಲಿದ್ದಾರೆ ಎಂದರು.
ಇಲ್ಲಿನ ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ಪರಂಪರೆಯನ್ನು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಜೋಡಿಸಲಾಗುವುದು.ಈ ಈವೆಂಟ್ ಕ್ಯಾಲೆಂಡರ್ ಜಿಲ್ಲೆಯ ಆಕರ್ಷಣೀಯ ಉತ್ಸವ ಹಾಗೂ ಕಾರ್ಯಕ್ರಮಗಳ ಮಾಹಿತಿ ಒಳಗೊಂಡಿದೆ.ಜಿಲ್ಲೆಯಲ್ಲಿ ವರ್ಷವಿಡೀ ಆಯೋಜಿಸುವ ಸಾಂಸ್ಕೃತಿಕ, ಸಾಹಸ, ಪರಿಸರ, ಧಾರ್ಮಿಕ ಕಾರ್ಯಕ್ರಮಗಳ ನಿಖರವಾದ ಮಾಹಿತಿ ಒಳಗೊಂಡಿದೆ .ಇದರಿಂದ ಇಡೀ ವರ್ಷ ಪ್ರವಾಸಿಗರನ್ನು ಜಿಲ್ಲೆಯತ್ತ ಆಕರ್ಷಿಸಬಹುದು. ವೆಬ್ ಪೋರ್ಟಲ್‌ನಲ್ಲಿ ಪ್ರವಾಸಿಗರಿಗೆ ಉಪಯುಕ್ತ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮೂಡಾ ಅಧ್ಯಕ್ಷ ಸದಾಶಿವ, ಪ್ರವಾಸೋದ್ಯಮ ಉಪನಿರ್ದೇಶಕ ಮಾಣಿಕ್ಯ, ಗೌರವ್ ಹೆಗ್ಡೆ ಉಪಸ್ಥಿತರಿದ್ದರು.