
Mangalore: ಮೂಡಾ ಸೈಟ್ ಪ್ರಕರಣ- ಸಿಬಿಐ ತನಿಖೆಗೆ ಬಿಜೆಪಿ ಕಾರ್ಯಕಾರಿಣಿ ಆಗ್ರಹ
ಮಂಗಳೂರು: ಮೈಸೂರಿನ ಮೂಡಾ ಸೈಟ್ ಅಕ್ರಮ ವಿತರಣೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಮುಂದಾಗಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ರವಿ ಕುಮಾರ್ ಆಗ್ರಹಿಸಿದ್ದಾರೆ.
ಸಂಘನಿಕೇತನದಲ್ಲಿ ಶನಿವಾರ ನಡೆದ ದ.ಕ.ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿದ ಅವರು, ಈ ಹಿಂದೆ ಬಿಜೆಪಿಯವರು ಸೈಟ್ ನೀಡಿದ್ದಾರೆ, ಹಾಗೆ ನಾನು ತೆಗೆದುಕೊಂಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಸಮಜಾಯಿಷಿ ನೀಡುತ್ತಿದ್ದಾರೆ. ಹಾಗಾದರೆ ಅವರು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಲಿ. ತಪ್ಪು ಯಾರದ್ದೇ ಆದೂ ಶಿಕ್ಷೆ ಆಗಲಿ ಎಂದು ಒತ್ತಾಯಿಸಿದರು.
ಸಮಾಜವಾದದ ಸಿದ್ದರಾಮಯ್ಯ ಹಿಂದೆ ಇಂದಿರಾಗಾಂಧಿಯ ಸರ್ವಾಧಿಕಾರದ ವಿರುದ್ಧ ಜಾರ್ಜ್ ಫರ್ನಾಂಡಿಸ್ ಜೊತೆ ಹೋರಾಟ ನಡೆಸಿದ್ದರು. ಈಗ ಅದೇ ಸಿದ್ದರಾಮಯ್ಯ ಸಮಾಜವಾದಿ ಬದಲು ಮಜವಾದಿಯಾಗಿ ಬದಲಾಗಿದ್ದಾರೆ, ಆದರ್ಶಗಳಿಗೆ ತಿಲಾಂಜಲಿ ನೀಡಿದ್ದಾರೆ ಎಂದು ಆರೋಪಿಸಿದರು.
ಸಿಎಂ ಸಿದ್ದರಾಮಯ್ಯ ಅವರು ಗ್ಯಾರಂಟಿ ಹೆಸರಲ್ಲಿ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಪ್ರತಿಯೊಂದು ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು, ಇದರಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಬೆಲೆ ಏರಿಕೆಯ ಪರಿಣಾಮ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಗೊತ್ತಾಗಲಿದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಯೋಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರೆ, ಇನ್ನೂ ಕನಿಷ್ಠ ಆರು ಸ್ಥಾನಗಳನ್ನು ರಾಜ್ಯದಲ್ಲಿ ಬಿಜೆಪಿ ಗೆಲ್ಲುತ್ತಿತ್ತು ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಮತದಾರರು ಎರಡೂ ಪಕ್ಷಗಳಿಗೆ ನ್ಯಾಯ ಒದಗಿಸಿದ್ದಾರೆ. 25 ಸ್ಥಾನಗಳ ಪೈಕಿ ಎನ್ಡಿಎ 19 ಹಾಗೂ ಕಾಂಗ್ರೆಸ್ 9 ಸ್ಥಾನಗಳಲ್ಲಿ ಗೆದ್ದಿದೆ. ಬಿಜೆಪಿ 17 ಸ್ಥಾನ ಗಳಿಸುವ ಮೂಲಕ ಮೂರನೇ ಬಾರಿಯೂ ನರೇಂದ್ರ ಮೋದಿಯೇ ಪ್ರಧಾನಿ ಆಗಬೇಕು ಎಂದು ಜನತೆ ಬಯಸಿದ್ದಾರೆ. 135 ಸೀಟು ಗೆದ್ದು 2ನೇ ಬಾರಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರಕ್ಕೆ ಮತದಾರರು ಸರಿಯಾದ ಪಾಠ ಕಲಿಸಿದ್ದಾರೆ. ಆದರೆ ಸರಿಯಾಗಿ ಯೋಚಿಸಿ ಟಿಕೆಟ್ ನೀಡಿದ್ದರೆ ಬಿಜೆಪಿ 25ರಲ್ಲಿ 23 ಸ್ಥಾನ ವರೆಗೆ ಗೆಲ್ಲುತ್ತಿತ್ತು ಎಂದು ಹೇಳಿದರು.
ಪಕ್ಷ ಸಂಘಟನೆಗೆ ದ.ಕ.ಜಿಲ್ಲೆ ರಾಜ್ಯಕ್ಕೆ ಪ್ರೇರಣೆಯಾಗಿದೆ. ಮಂಗಳೂರು ಎಂದರೆ, ಸಂಘಟನೆ, ಐಡಿಯಾಲಜಿ ಹಾಗೂ ಹಿಂದುತ್ವಕ್ಕೆ ಮತ್ತೊಂದು ಹೆಸರಾಗಿದೆ ಕರಾವಳಿಯಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಇದೇ ರೀತಿ ಇಡೀ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಬೇಕು. ಲೋಕಸಭಾ ಚುನಾವಣೆಯಲ್ಲಿ ಶೇ.೫೧ರಷ್ಟು ಬಿಜೆಪಿಯನ್ನು ಜನತೆ ಬೆಂಬಲಿಸಿದ್ದಾರೆ. ಬಿಜೆಪಿಯನ್ನು ಜನತೆ ಬೆಂಬಲಿಸುವಾಗ ಕಾರ್ಯಕರ್ತರು ಕೂಡ ಪಕ್ಷವನ್ನು ಬೆಳೆಸಲು ಸಿದ್ಧರಿರಬೇಕು ಅಲ್ಲವೇ ಎಂದು ಹೇಳಿದರು.
ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು.
ದ.ಕ. ಚುನಾವಣಾ ಪ್ರಭಾರಿ ಪ್ರೇಮಾನಂದ ಶೆಟ್ಟಿ ಪ್ರಾಸ್ತಾವಿಕದಲ್ಲಿ, ಈಗಾಗಲೇ ವಿವಿಧ ಪ್ರಕೋಷ್ಠಗಳ ರಚನೆ ಮುಗಿಸಿ ಹೊಸ ತಂಡಗಳು ಯೋಜನಾಬದ್ಧ ಕಾರ್ಯ ನಡೆಸುತ್ತಿವೆ. ಪಕ್ಷ ಸಂಘಟನೆಗೆ ಇನ್ನಷ್ಟು ವೇಗ ನೀಡಲು ಈ ಕಾರ್ಯಕಾರಿಣಿ ಆಯೋಜಿಸಲಾಗಿದೆ. ಮುಂದಿನ ನಗರ ಸ್ಥಳೀಯ ಸಂಸ್ಥೆ, ತಾ.ಪಂ., ಜಿ.ಪಂ. ಚುನಾವಣೆಯಲ್ಲಿ ಪಕ್ಷ ಯಶಸ್ಸುಗಳಿಸುವ ಬಗ್ಗೆ ಕಾರ್ಯಕಾರಿಣಿಯಲ್ಲಿ ಚರ್ಚಿಸಲಾಗುವುದು ಎಂದರು.
ಈ ಸಂದರ್ಭ ನೂತನವಾಗಿ ಆಯ್ಕೆಯಾದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತು ನೈಋತ್ಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಇವರನ್ನು ಸನ್ಮಾನಿಸಲಾಯಿತು.
ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ, ಉಪ ಮೇಯರ್ ಸುನಿತಾ, ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಸಹ ಪ್ರಭಾರಿ ರಾಜೇಶ್ ಕಾವೇರಿ ಮೊದಲಾದವರಿದ್ದರು.
ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ ಸ್ವಾಗತಿಸಿದರು. ಜಗದೀಶ್ ಶೆಟ್ಟಿ ವಂದೇ ಮಾತರಂಮಹಾಡಿದರು. ರಾಕೇಶ್ ರೈ ಕಡೆಂಜಿ, ಯತೀಶ್ ಆರ್ವಾರ್ ನಿರೂಪಿಸಿದರು.