
Mangalore: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಟ್ಟಡ ಕಾರ್ಮಿಕರಿಂದ ಪ್ರತಿಭಟನಾ ಪ್ರದರ್ಶನ
ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳ ವಿರುದ್ಧ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಸಿಐಟಿಯು ಸಂಯೋಜಿತಗೊಂಡಿರುವ ಕಟ್ಟಡ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಜು.1 ರಂದು ಮಂಗಳೂರು ನಗರದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯೆದುರು ಬ್ರಹತ್ ಪ್ರತಿಭಟನಾ ಪ್ರದರ್ಶನ ನಡೆಯಿತು.
ರಾಜ್ಯಾದ್ಯಂತ ಹೋರಾಟದ ಭಾಗವಾಗಿ 600ಕ್ಕೂ ಮಿಕ್ಕಿದ ಕಟ್ಟಡ ಕಾರ್ಮಿಕರು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಆಗುತ್ತಿರುವ ಅನ್ಯಾಯಗಳ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರ.
ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿದ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ವಸಂತ ಆಚಾರಿ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯನ್ನೇ ಇಲ್ಲವಾಗಿಸಲು ಶತಪ್ರಯತ್ನ ಪಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಟ್ಟಡ ಕಾರ್ಮಿಕರ ಬೇಡಿಕೆಗಳಿಗೆ ಯಾವುದೇ ರೀತಿಯ ಸ್ಪಂದನ ಮಾಡುತ್ತಿಲ್ಲ. ಕಲ್ಯಾಣ ಮಂಡಳಿಯಲ್ಲಿದ್ದ ಸಾವಿರಾರು ಕೋಟಿ ರೂ. ಹಣವನ್ನು ಲೂಟಿಗೈದಿರುವುದೇ ಸರಕಾರಗಳ ಸಾಧನೆಯಾಗಿದೆ. ಈ ಬಗ್ಗೆ ಸ್ವತಃ ರಾಜ್ಯ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಹಾಗೂ ಕಲ್ಯಾಣ ಮಂಡಳಿಗೆ ಛೀಮಾರಿ ಹಾಕಿರುವುದು ಗಮನಾರ್ಹ ಸಂಗತಿಯಾಗಿದೆ. ಹಲವಾರು ದಶಕಗಳ ಕಾಲ ಹೋರಾಟದ ಮೂಲಕ ಪಡೆದುಕೊಂಡ ಕಾನೂನುಗಳನ್ನು ಇಲ್ಲವಾಗಿಸಲು ಪ್ರಯತ್ನಿಸುತ್ತಿರುವ ಸರಕಾರಗಳ ವಿರುದ್ಧ ಸಮರಧೀರ ಹೋರಾಟ ನಡೆಸುವ ಮೂಲಕ ಬೇಡಿಕೆಗಳನ್ನು ಈಡೇರಿಸಲು ಕಟ್ಟಡ ಕಾರ್ಮಿಕರು ಕಟಿಬದ್ದರಾಗಬೇಕಾಗಿದೆ ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಶೈಕ್ಷಣಿಕ, ಮದುವೆ, ವೈದ್ಯಕೀಯ ಪರಿಹಾರಕ್ಕೆ ಸಲ್ಲಿಕೆಯಾದ ಸಾವಿರಾರು ಅರ್ಜಿಗಳು ಇಂದಿಗೂ ಬಾಕಿಯಾಗಿದ್ದು, ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಕಲ್ಯಾಣ ಮಂಡಳಿಯಲ್ಲಿದ್ದ ಸಾವಿರಾರು ಕೋಟಿ ಹಣವನ್ನು ಲ್ಯಾಪ್ ಟಾಪ್, ವೈದ್ಯಕೀಯ ತಪಾಸಣೆ, ಮಹಿಳೆಯರಿಗೆ ಪ್ಯಾಡ್ ಖರೀದಿ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಮಾತ್ರವಲ್ಲದೆ ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸುವ ಕೇಂದ್ರ ಸರಕಾರದ ಹುನ್ನಾರಕ್ಕೆ ಕಟ್ಟಡ ಕಾರ್ಮಿಕರ ಬದುಕನ್ನು ಬಲಿ ತೆಗೆದುಕೊಳ್ಳುತ್ತಿರುವುದು ತೀರಾ ಆತಂಕಕಾರಿಯಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಅವರು, ರಾಜ್ಯ ಸರಕಾರದ ಮುಂದಿಟ್ಟಿರುವ 12 ಬೇಡಿಕೆಗಳ ಬಗ್ಗೆ ಮಾತನಾಡಿ, ರಾಜ್ಯ ಸರಕಾರದ ಅನ್ಯಾಯಗಳ ಬಗ್ಗೆ ತಿಳಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ನಾಯಕರಾದ ಸುಕುಮಾರ್, ಜಯಂತ ನಾಯಕ್ ಮಾತನಾಡಿ, ಕಟ್ಟಡ ಕಾರ್ಮಿಕರ ಬದುಕಿನ ಬವಣೆಯನ್ನು ವಿವರಿದರು. ಪ್ರತಿಭಟನಾ ಸ್ಥಳಕ್ಕೆ ಸಹಾಯಕ ಕಾರ್ಮಿಕ ಆಯುಕ್ತರು ಭೇಟಿಯಾಗಿ ಮನವಿಯನ್ನು ಸ್ವೀಕರಿಸಿ, ಸೂಕ್ತ ರೀತಿಯಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಹೋರಾಟದ ನೇತೃತ್ವವನ್ನು ಕಟ್ಟಡ ಕಾರ್ಮಿಕರ ಜಿಲ್ಲಾ ನಾಯಕರಾದ ರವಿಚಂದ್ರ ಕೊಂಚಾಡಿ, ಜನಾರ್ದನ ಕುತ್ತಾರ್, ಚಂದ್ರಹಾಸ್ ಪಿಲಾರ್, ರೋಹಿದಾಸ್, ವಸಂತಿ ಕುಪ್ಪೆಪದವು, ನೋಣಯ್ಯ ಗೌಡ, ಯಶೋಧ ಮಳಲಿ, ಶಂಕರ ವಾಲ್ಪಾಡಿ, ರಾಧಾ ಮೂಡಬಿದ್ರೆ, ಬಿಜು ಆಗಸ್ಟಿನ್, ವಿಶ್ವನಾಥ ಸುಳ್ಯ, ವಸಂತ ಪೇಳ್ತಡ್ಕ, ದಿನೇಶ್ ಶೆಟ್ಟಿ, ಪಾಂಡುರಂಗ ಕೊಂಚಾಡಿ, ಅಶೋಕ್ ಸಾಲ್ಯಾನ್, ಲೋಕೇಶ್ ಎಂ, ಪ್ರಮೀಳಾ ಸುಳ್ಯ, ಭಾರತಿ ಸುಳ್ಯ, ರಾಮಚಂದ್ರ ಪಜೀರ್, ಅಶೋಕ ಬಂಗೇರ, ಜಯಶೀಲ ಮತ್ತಿತರರು ವಹಿಸಿದ್ದರು.