Mangalore: ರಾಜ್ಯ ಸರಕಾರದಿಂದ ರೈತ ವಿರೋಧಿ ನೀತಿ
ಮಂಗಳೂರು: ರಾಜ್ಯ ಸರಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದು ಸರಿಯಲ್ಲ. ರಾಜ್ಯ ಸರಕಾರ ರೈತಪರವಾದ ನೀತಿಗಳನ್ನು ಅನುಷ್ಠಾನ ಮಾಡುವ ಜತೆಗೆ ರೈತರ ಆತ್ಮಹತ್ಯೆ ಸರಣಿ ಮುಂದುವರಿಯದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ದ.ಕ. ಜಿಲ್ಲಾ ಘಟಕ ಒತ್ತಾಯಿಸಿದೆ.
ರಾಜ್ಯ ಸರಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಜು.18 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಮಳೆ ಇರುವುದರಿಂದ ಪ್ರತಿಭಟನೆ ಕೈಬಿಟ್ಟು, ಡಿಸಿಗೆ ಮನವಿ ನೀಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ದ.ಕ.ಜಿಲ್ಲಾ ಘಟಕ ಅಧ್ಯಕ್ಷ ಓಸಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಕುಮ್ಕಿ ಹಕ್ಕು ಹಾಗೂ ಕಾನ-ಬಾನೆಯಲ್ಲಿರುವ ಬೆಳೆಗಳ ಜಮೀನನ್ನು ಗುತ್ತಿಗೆ ನೀಡುವ ಸುತ್ತೋಲೆಯನ್ನು ಸರಕಾರ ವಾಪಾಸು ಪಡೆಯಬೇಕು. ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದ್ದು, ಕಳೆದ ವರ್ಷದಿಂದ ಏಪ್ರಿಲ್ ತನಕ ರಾಜ್ಯದಲ್ಲಿ 1182 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಳ್ಯದಲ್ಲಿ ನಾಲ್ಕು ಮಂದಿ ರೈತರು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಸರಕಾರ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಿ, ಸುಮ್ಮನಿದೆ. ಪರಿಹಾರ ಮೊತ್ತವನ್ನು ಹೆಚ್ಚಳ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಪ್ರಧಾನ ಮಂತ್ರಿ ಫಸಲುಭೀಮಾ ಯೋಜನೆಯಲ್ಲಿ ಶೇ.20ರಿಂದ 30ರಷ್ಟು ರೈತರಿಗೆ ವಿಮೆ ಹಣವೇ ಸಿಕ್ಕಿಲ್ಲ. ಕಾಡು ಪ್ರಾಣಿಗಳಿಂದ ಹಾನಿಯಾಗುವ ಬೆಳೆಗಳಿಗೆ ವೈಜ್ಞಾನಿಕ ನಷ್ಟ ಪರಿಹಾರವನ್ನು ತುಂಬಿಕೊಡಬೇಕು. ಪುದುವೆಟ್ಟುವಿನಲ್ಲಿ ಕಲ್ಲಿನ ಕೋರೆಯಿಂದಾಗಿ ಸರಿಸುಮಾರು 50 ಮನೆಗಳಿಗೆ ಹಾನಿಯಾಗಿದೆ. ಇಂತಹ ಕಲ್ಲಿನ ಕೋರೆಯ ಬಗ್ಗೆ ಜಿಲ್ಲಾಧಿಕಾರಿ ಕ್ರಮ ಜರುಗಿಸಬೇಕು. ಯುಪಿಸಿಎಲ್ನಿಂದ ಕೇರಳಕ್ಕೆ ದ.ಕ. ಜಿಲ್ಲೆಯ 17 ಗ್ರಾಮಗಳ ಮೂಲಕ ವಿದ್ಯುತ್ ಮಾರ್ಗವನ್ನು ಅಂಡರ್ ಗ್ರೌಂಡ್ ಅಥವಾ ಸಮುದ್ರ ತಟದ ಮೂಲಕ ಸಾಗಿಸುವಂತೆ ಕ್ರಮ ಜರುಗಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರೈತರ ಸಮಸ್ಯೆಗಳ ಕುರಿತು ಸಭೆಯೊಂದನ್ನು ಕರೆಯಬೇಕು ಎನ್ನುವ ಪ್ರಮುಖ ಬೇಡಿಕೆಗಳ ಮನವಿಯನ್ನು ಡಿಸಿ ಮೂಲಕ ಸಿಎಂ ಅವರ ಗಮನಕ್ಕೆ ತರುತ್ತಿದ್ದೇವೆ ಎಂದರು.
ರೈತರು ಕೃಷಿ ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕ ಪಡೆಯಲು ವೆಚ್ಚವನ್ನು ಸ್ವತಃ ರೈತರೇ ಭರಿಸಬೇಕು ಎಂದು ರಾಜ್ಯ ಸರಕಾರ ಆದೇಶಿಸಿದೆ. ಈ ತೀರ್ಮಾನ ರೈತರಿಗೆ ಹೊರೆಯಾಗಿದೆ. 2ರಿಂದ 3 ಲಕ್ಷ ರೂ. ವೆಚ್ಚ ಪಾವತಿಸುವುದು ಸಾಧ್ಯವಿಲ್ಲ. ಸರಕಾರ ಈ ತೀರ್ಮಾನ ವಾಪಸ್ ಪಡೆದು ಹಿಂದಿನ ಪದ್ಧತಿ ಮುಂದುವರೆಸಬೇಕು, ಪಂಪ್ಸೆಂಟ್ ವಿದ್ಯುತ್ ಸಂಪರ್ಕ ವೆಚ್ಚವನ್ನು ರಾಜ್ಯ ಸರಕಾರ ಭರಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಪ್ರೇಮನಾಥ್ ಶೆಟ್ಟಿ ಬಾಳ್ತಿಲ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರೋನಿ ಮೆಂಡೋನ್ಸಾ, ಬಂಟ್ವಾಳ ತಾಲೂಕು ಸಂಘಟನಾ ಕಾರ್ಯದರ್ಶಿ ಸದಾನಂದ ಶೀತಲ್ ಉಪಸ್ಥಿತರಿದ್ದರು.