ಶಿಥಿಲ ತಂತಿ, ಕಂಬಗಳ ಬದಲಾವಗೆ ವಿಶೇಷ ಆದ್ಯತೆ
ಮಂಗಳೂರು: ಮೆಸ್ಕಾಂ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ತಂತಿ, ಕಂಬಗಳನ್ನು ಪರಿಶೀಲಿಸಿ ಅವುಗಳನ್ನು ಬದಲಾಯಿಸುವ ಕಾರ್ಯ ಆದ್ಯತೆಯ ನೆಲೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಸಾರ್ವಜನಿಕ ಸುರಕ್ಷತೆಯೇ ಮೆಸ್ಕಾಂನ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಗರಿಷ್ಠ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದಾಗಿಯೂ ಪ್ರಕೃತಿ ವಿಕೋಪದಿಂದಾಗಿ ಕೆಲವು ವಿದ್ಯುತ್ ಅವಘಡಗಳು ಸಂಭವಿಸುತ್ತಿರುವುದು ದುರದೃಷ್ಟಕರವಾಗಿದ್ದು ಸಂಸ್ಥೆ ಪ್ರಕಟಣೆಯಲ್ಲಿ ವಿಷಾದ ವ್ಯಕ್ತಪಡಿಸಿದೆ.
ಮಳೆ ಗಾಳಿಯಿಂದಾಗಿ ಪ್ರಸಕ್ತ ವರ್ಷದಲ್ಲಿ ಮೆಸ್ಕಾಂನ ಆಸ್ತಿಗಳಿಗೆ ಹಾನಿಯುಂಟಾಗಿ ಅಪಾರ ನಷ್ಟ ಸಂಭವಿಸಿರುತ್ತದೆ. ವಿದ್ಯುತ್ ತಂತಿ, ಕಂಬಗಳ ಬದಲಾವಣೆಗೆ ಅಪಾರ ವೆಚ್ಚ ತಗಲುತ್ತಿದ್ದು, ಮೆಸ್ಕಾಂ ಆರ್ಥಿಕ ಸಂಪನ್ಮೂಲವನ್ನು ಹೊಂದಿಸಿಕೊಂಡು ತತ್‌ಕ್ಷಣ ಸರಿಪಡಿಸಲು ಕ್ರಮಕೈಗೊಳ್ಳಲಾಗುತ್ತಿದೆ.
ಒಂದೊಮ್ಮೆ ಶಿಥಿಲ ತಂತಿ, ಕಂಬಗಳು, ದೋಷಪೂರಿತ ವಿದ್ಯುತ್ ಪರಿವರ್ತಕಗಳು ಇಲಾಖೆಯ ಗಮನಕ್ಕೆ ಬಾರದೆ ಉಳಿದುಕೊಂಡಿದ್ದಲ್ಲಿ, ಸಾರ್ವಜನಿಕರು ಇದನ್ನು ಸ್ಥಳೀಯ ಮೆಸ್ಕಾಂ ಸಿಬ್ಬಂದಿಯ ಗಮನಕ್ಕೆ ತಂದ ನಂತರವೂ ಇದಕ್ಕೆ ಸ್ಪಂದನೆ ದೊರೆಯದಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕಾಗಿ ಸಾರ್ವಜನಿಕರಲ್ಲಿ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.