
Mangalore: ರಾಹುಲ್ ಗಾಂಧಿ ದೇಶದ ಹಿಂದುಗಳ ಕ್ಷಮೆಯಾಚಿಸಬೇಕು: ಸತೀಶ್ ಪ್ರಭು
ಮಂಗಳೂರು: ರಾಹುಲ್ ಗಾಂಧಿ ಅವರು ಬಿಜೆಪಿಯನ್ನು ಹಣಿಯುವ ಭರದಲ್ಲಿ ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಹಿಂದೂ ದೇವರ ಚಿತ್ರವನ್ನು ಪ್ರದರ್ಶಿಸಿರುವುದು ಹಿಂದೂಗಳನ್ನು ಅಸತ್ಯ, ಹಿಂಸೆ ಮತ್ತು ದ್ವೇಷದೊಂದಿಗೆ ಸಮೀಕರಿಸುವುದು ಅಕ್ಷ್ಯಮವಾಗಿದ್ದು, ದೇಶದ ಅಸ್ಮಿತೆಗೆ ಎಸಗಿದ ಅಪಚಾರ. ಈ ಕೂಡಲೇ ದೇಶದ ಹಿಂದೂಗಳ ಕ್ಷಮೆ ಯಾಚಿಸಬೇಕೆಂದು ಬಿಜೆಪಿ ಆಗ್ರಹಿಸುತ್ತದೆ. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಪ್ರತಿಭಟಿಸುವುದಾಗಿ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸತೀಶ್ ಪ್ರಭು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ ಅವರು ನಿನ್ನೆಯ ದಿನ ಸಂಸತ್ತಿನಲ್ಲಿ ಆಡಿದ ಮಾತುಗಳು ದೇಶದ ಹಿಂದೂಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ. ಹಿಂದೂಗಳೆಂದುಕೊಳ್ಳುವವರು ದೇಶದಲ್ಲಿ ಹಿಂಸೆ, ಸುಳ್ಳು, ದ್ವೇಷ ಉತ್ಪಾದಿಸುವವರು ಎಂದು ಹೇಳಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು.
ಯಾವುದೇ ಸಮುದಾಯವನ್ನು ಹಿಂಸೆಯೊಂದಿಗೆ, ದ್ವೇಷದೊಂದಿಗೆ ಸಮೀಕರಿಸುವುದು ಸರಿಯಲ್ಲ. ಯಾರನ್ನೋ ಓಲೈಸಲು, ರಾಜಕೀಯ ಲಾಭ ಪಡೆಯಲು ವಿಶ್ವಕ್ಕೆ ನಿರ್ಮಲ ಜ್ಞಾನ, ಶಾಂತಿಯ ಸಹಬಾಳ್ವೆಯ ಸಂದೇಶ ನೀಡಿದ, ಉದಾತ್ತ ಮನೋಭಾವದ ಹಿಂದೂಗಳನ್ನು ಹಿಂಸೆ, ಅಸತ್ಯ, ದ್ವೇಷ ಹರಡುವರೆಂದು ಬಿಂಬಿಸಿರುವುದು ಅವರ ಅಪಕ್ವ ಮಾನಸಿಕತೆಯನ್ನು ತೋರಿಸುತ್ತದೆ. ಸಂವಿಧಾನದ ಅತ್ಯುಚ್ಚ, ಪವಿತ್ರ ಕೇಂದ್ರವಾಗಿರುವ ಸಂಸತ್ತಿನಲ್ಲಿ, ಘನತೆ ಗೌರವ ಹೊಂದಿರುವ ವಿಪಕ್ಷ ನಾಯಕನ ಸ್ಥಾನದಿಂದ ಈ ಮಾತುಗಳನ್ನು ಆಡಿರುವುದು ಸಂಸತ್ತಿಗೆ ಮತ್ತು ವಿಪಕ್ಷ ನಾಯಕನ ಸ್ಥಾನಕ್ಕೂ ಮಾಡಿರುವ ಅಪಚಾರ ಮತ್ತು ಅಗೌರವ ಎಂದು ಬಿಜೆಪಿ ಅಭಿಪ್ರಾಯ ಪಟ್ಟಿದೆ.
ಸಂಸತ್ತಿನಲ್ಲಿ ಹಿಂದೂ ದೇವರುಗಳ ಚಿತ್ರಗಳನ್ನು ಪ್ರದರ್ಶಿಸಿರುವುದು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆಣಕಿದೆ. ಯಾವುದೇ ಧರ್ಮದ ಜೊತೆಗೆ ಹಿಂಸಾಚಾರವನ್ನು, ಅಸತ್ಯವನ್ನು, ದ್ವೇಷವನ್ನು ತಳುಕು ಹಾಕುವುದು ಸಭ್ಯತೆ ಅಲ್ಲ. ರಾಹುಲ್ ಗಾಂಧಿ ದೇಶದ ಹಿಂದೂಗಳ ಕ್ಷಮೆಯನ್ನು ಯಾಚಿಸಬೇಕೆಂದು ಬಿಜೆಪಿ ಆಗ್ರಹಿಸುತ್ತದೆ.
ಕೇವಲ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಈ ಹಿಂದೆ ಸಂವಿಧಾನಕ್ಕೆ ಹಲವು ಬಾರಿ ತಿದ್ದುಪಡಿ ತಂದ, ಆಡಳಿತ ಯಂತ್ರವನ್ನು ದುರುಪಯೋಗಪಡಿಸಿದ, ದೇಶದ ಜನತೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯ ಹರಣ ಮಾಡಿದ, ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿ ವಿರೋಧಿಗಳನ್ನು ಹಿಂಸಿಸಿದ ಕಾಂಗ್ರೇಸಿನ ನಾಯಕರು ಇಂದು ಸಂವಿಧಾನದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದು ತಿಳಿಸಿದರು.
ಪ್ರಮುಖರಾದ ಅರುಣ್ ಜಿ. ಶೇಟ್, ಗುರುಚರಣ್, ವಸಂತ್ ಪೂಜಾರಿ ಇದ್ದರು.