Mangalore: ಹೆಚ್ಚುವರಿ ಹಣ ವಸೂಲಿ-ಬಡ್ಡಿ ಸಹಿತ ಮರು ಪಾವತಿಗೆ ಆದೇಶ
ಮಂಗಳೂರು: ಮದುವೆ ಕಾರ್ಯಕ್ರಮದ ವೆಚ್ಚವಾಗಿ ಹೆಚ್ಚುವರಿ ಹಣ ಪಡೆದುಕೊಂಡ ರೆಸಾರ್ಟ್‌ನವರು ಆ ಮೊತ್ತವನ್ನು ಬಡ್ಡಿ ಸಮೇತ ಮರುಪಾವತಿ ಮಾಡಬೇಕು ಎಂದು ಮಂಗಳೂರಿನ ಜಿಲ್ಲಾ ಗ್ರಾಹಕರ ವೇದಿಕೆ ಆದೇಶ ನೀಡಿದೆ.
ಮಂಗಳೂರಿನ ಕುಲಶೇಖರ ಸಮೀಪದ ಕಲ್ಪನೆಪದವಿನ ಗಣೇಶ ಕೃಷ್ಣ ಮತ್ತು ಶ್ರುಂಗ ಅವರ ವಿವಾಹವು 2023ರ ನ.27ರಿಂದ ನ.30ರವರೆಗೆ ಚಿಕ್ಕಮಗಳೂರಿನ ಮಲ್ಲೆನಳ್ಳಿ ಗ್ರಾಪಂ ವ್ಯಾಪ್ತಿಯ ಕರ್ಕ್ನಳ್ಳಿ ಬಿಂದಿಗ ಗ್ರಾಮದ ಬಿಂದಿಗ ಪೀಕ್ ರೆಸಾರ್ಟ್‌ನಲ್ಲಿ ನಡೆದಿತ್ತು.
ಮದುವೆ ಕಾರ್ಯಕ್ರಮದ ಮುಂಚಿತವಾಗಿ ರೆಸಾರ್ಟ್‌ನವರು ಮತ್ತು ಮದುವೆ ಆಯೋಜಕರ (ದೂರುದಾರರು) ಮಧ್ಯೆ ವಿವಾಹದ ಖರ್ಚಿನ ಬಾಬ್ತು 14,21,345 ರೂ.ಗಳಿಗೆ ಕರಾರು ಒಪ್ಪಂದ ನಡೆದಿತ್ತು.
ಆಯೋಜಕರು ಕರಾರಿನ ಷರತ್ತುಗಳಂತೆ ಹಣ ಪಾವತಿಸಿದ್ದರು. ಆದರೆ 18,55,038 ರೂ.ಗಳನ್ನು ಪಾವತಿಸದಿದ್ದರೆ ರೆಸಾರ್ಟ್ ನಿಂದ ಕದಲುವಂತಿಲ್ಲ ಎಂದು ರೆಸಾರ್ಟ್‌ವರು ತಾಕೀತು ಮಾಡಿದ್ದರು ಎನ್ನಲಾಗಿದೆ. ಉಪಾಯವಿಲ್ಲದೆ ಆಯೋಜಿಕರು ಹೆಚ್ಚುವರಿ ಪಾವತಿಸಿದ್ದರು. ಹೆಚ್ಚುವರಿಯಾಗಿ 4,33,693 ರೂ.ಗಳನ್ನು ರೆಸಾರ್ಟ್‌ವರು ಪಡೆದಿದ್ದಾರೆ ಎಂದು ಆರೋಪಿಸಿ ಮಂಗಳೂರಿನ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿದ್ದರು.
ನ್ಯಾಯಾಲಯವು ದೂರನ್ನು ಪರಿಶೀಲಿಸಿ ರೆಸಾರ್ಟ್ನವರು ಹೆಚ್ಚುವರಿಯಾಗಿ ಪಡೆದ 4,33,693 ರೂ.ಗಳನ್ನು ವಾಪಸ್ ನೀಡುವಂತೆ ಹಾಗೂ ಆ ಹಣದ ಮೇಲೆ ಶೇ.8ರಷ್ಟು ಬಡ್ಡಿಯನ್ನು 2024ರ ಎ.18ರಿಂದ ಅನ್ವಯವಾಗುವಂತೆ ನೀಡಬೇಕು. ಅಲ್ಲದೆ 35,000 ರೂ.ವನ್ನು ಪರಿಹಾರ ಧನವಾಗಿ ಕೊಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ದೂರುದಾರರ ಪರವಾಗಿ ಮಂಗಳೂರಿನ ನ್ಯಾಯವಾದಿಗಳಾದ ಚಂದ್ರಹಾಸ್ ಕದ್ರಿ ಮತ್ತು ದೀನನಾಥ ಶೆಟ್ಟಿ ವಾದಿಸಿದ್ದರು.