
Mangalore: ಡೆಂಘೀ ನಿಯಂತ್ರಣದಲ್ಲಿ ಸರ್ಕಾರದ ನಿರ್ಲಕ್ಷ್ಯ: ಡಾ.ಧನಂಜಯ ಸರ್ಜಿ
ಮಂಗಳೂರು: ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಮಾರಣಾಂತಿಕ ಡೆಂಘೀ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಬಗ್ಗೆ ದೂರುತ್ತಿದ್ದ ಸಿದ್ದರಾಮಯ್ಯ ಈಗ ಡೆಂಘೀ ವ್ಯಾಪಿಸುತ್ತಿರುವಾಗ ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.
ರಾಜ್ಯದ 31 ಜಿಲ್ಲೆಗಳಲ್ಲಿ 6,300 ಡೆಂಘೀ ಪ್ರಕರಣ ಪತ್ತೆಯಾಗಿದೆ. ಮಂಡ್ಯದಲ್ಲಿ ಆರೋಗ್ಯಾಧಿಕಾರಿಯೇ ಮೃತಪಟ್ಟಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಬೆಡ್, ಐಸಿಯು ಘಟಕಗಳು ಭರ್ತಿಯಾಗುತ್ತಿವೆ. ಪ್ರತಿ ಆಸ್ಪತ್ರೆಗಳಲ್ಲೂ ಕನಿಷ್ಠ 50 ಡೆಂಘೀ ಪ್ರಕರಣಗಳು ಪತ್ತೆಯಾಗುತ್ತಿವೆ. ಇಷ್ಟಾದರೂ ರಾಜ್ಯ ಸರ್ಕಾರ ಮಾತ್ರ ಇದೊಂದು ಗಂಭೀರ ಸಂಗತಿಯೇ ಅಲ್ಲ ಎಂಬಂತೆ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದರು.
2014ರಲ್ಲಿ ಡೆಂಘೀ ಪ್ರಕರಣ ವ್ಯಾಪಕವಾಗಿ ಕಾಣಿಸಿ ಸಾವಿಗೆ ಕಾರಣವಾಗಿತ್ತು. ಹಾಗಾಗಿ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಶಿಕ್ಷಣ ಸಂಸ್ಥೆಗಳಲ್ಲಿ ಕೂಡ ಸೂಕ್ತ ತ ಪಾಸಣೆ, ವೈದ್ಯಕೀಯ ಉಪಚಾರ ನಡೆಸಲು ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಗಳಿಂದ ಶಂಕಿತ ಡಂಘೀ ಪ್ರಕರಣಗಳ ರಕ್ತದ ಮಾದರಿಯನ್ನು ಸರ್ವಲೆನ್ಸ್ ಅದಿ ಕಾರಿಗಳು ತರಿಸಿಕೊಳ್ಳಬೇಕು. ಆಗ ಮಾತ್ರ ಡೆಂಘೀ ಪ್ರಕರಣಗಳ ನಿಖರ ಅಂಕಿಅಂಶ ಸಿಗಲು ಸಾಧ್ಯವಿದೆ ಎಂದರು.
ಡೆಂಘೀ ನಿಯಂತ್ರಣಕ್ಕೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು. ಜತೆಗೆ ಜನತೆಯ ವೈಯಕ್ತಿಕ ಆರೋಗ್ಯ ರಕ್ಷಣೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಆಯುಷ್ಮಾನ್ ಯೋಜನೆಯಡಿ ಚಿಕಿತ್ಸೆಗೆ ಅವಕಾಶ ಕಲ್ಪಿಸಬೇಕು. ಡೆಂಘೀ ನಿರೋಧಕ ಲಸಿಕೆ, ಔಷಧ ಸಿಂಪರಣೆಗೆ ಸರ್ಕಾರ ಸಮರೋಪಾದಿಯಲ್ಲಿ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರಧಾನ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ, ವಕ್ತಾರ ವಸಂತ ಪೂಜಾರಿ, ಕೋಶಾಧಿಕಾರಿ ಸಂಜಯ ಪ್ರಭು ಇದ್ದರು.