Mangalore: ಸೆಂಟ್ರಲ್ ರೈಲು ನಿಲ್ದಾಣ ಮೇಲ್ದರ್ಜೆಗೆ: ಸಚಿವ ವಿ. ಸೋಮಣ್ಣ

Mangalore: ಸೆಂಟ್ರಲ್ ರೈಲು ನಿಲ್ದಾಣ ಮೇಲ್ದರ್ಜೆಗೆ: ಸಚಿವ ವಿ. ಸೋಮಣ್ಣ


ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮುಂದಿನ 2 ತಿಂಗಳೊಳಗೆ ನೀಲನಕಾಶೆ ತಯಾರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಅವರು ಇಂದು ಬೆಳಗ್ಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದರು.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಆಧುನೀಕರಣ ಮಾಡುವ ಬಗ್ಗೆ ಕಳೆದ ಹಲವು ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ. ಈಗ ಒಂದು ಹಂತಕ್ಕೆ ಬಂದಿದ್ದು ಹಣ ಮೀಸಲಿರಿಸಲಾಗಿದೆ. ಶೀಘ್ರ ಅದರ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಪಾಲ್ಘಾಟ್, ಕೊಂಕಣ ಹಾಗೂ ಮೈಸೂರು ರೈಲು ವಿಭಾಗವೆಂಬ ಮೂರರ ಮಧ್ಯೆ ಮಂಗಳೂರು ಭಾಗದಲ್ಲಿ ಕೆಲವೊಂದಿಷ್ಟುಕೆಲಸಗಳು ನಡೆದಿಲ್ಲ. ಅದಕ್ಕಾಗಿ ಮೂರೂ ವಿಭಾಗದ ಅಧಿಕಾರಿ ಪ್ರಮುಖರ ಜತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.

10 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸಾವಿರಾರು ಕಿ.ಮೀ. ಹಳಿಗಳು ದ್ವಿಗುಣಗೊಂಡಿದೆ. ಹೊಸ ಲೈನ್ಗಳನ್ನು ಹಾಕಲಾಗುತ್ತಿದೆ. ಮೇಲ್ಸೇತುವೆ, ಕೆಳ ಸೇತುವೆ ಕಾಮಗಾರಿ ನಡೆಯುತ್ತಿದೆ. ಲೆವೆಲ್ ಕ್ರಾಸಿಂಗ್ ಆಗುತ್ತಿದೆ. ಅಮೃತ್ ಭಾರತ್, ಗತಿಶಕ್ತಿ ಯೋಜನೆಯಲ್ಲಿ ವಿವಿಧ ರೈಲು ನಿಲ್ದಾಣಗಳು ಅಭಿವೃದ್ಧಿ ಆಗಿದೆ. ಆದರೆ, ಮಂಗಳೂರು ಭಾಗ ಮಾತ್ರ ಹಲವು ಗೊಂದಲಗಳಿಂದ ಒದ್ದಾಡುತ್ತಿದೆ. ತಮಿಳುನಾಡು, ಕೇರಳ ಮತ್ತು ಗೋವಾ, ಮಹಾರಾಷ್ಟ್ರ ನಡುವೆ ಮಂಗಳೂರು-ಕಾರವಾರ ಭಾಗದಲ್ಲಿ ರೈಲ್ವೇ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ರೀತಿ ಆಗಿಲ್ಲ. ಮುಂದೆಯೂ ಇದನ್ನು ಹಾಗೆಯೇ ಇರಿಸಲು ಬಿಡುವುದಿಲ್ಲ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಜತೆಯಲ್ಲಿ ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದರು.

ಸಂಸದರಾದ ಕ್ಯಾ. ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮುಖ್ಯಸಚೇತಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರಾದ ದಿವಾಕರ ಪಾಂಡೇಶ್ವರ, ಚಂದ್ರಾವತಿ, ವೀಣಾಮಂಗಲ, ಪ್ರಮುಖರಾದ ಕಿಶೋರ್ ಕುಮಾರ್, ನಿತಿನ್ ಕುಮಾರ್, ರವಿಶಂಕರ ಮಿಜಾರ್ ಮೊದಲಾದವರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article