
Mangalore: ಚಿನ್ನಾಭರಣ ಕಳವು ಆರೋಪಿಗಳ ಬಂಧನ
ಮಂಗಳೂರು: ಮನೆಯ ಕಪಾಟಿನಲ್ಲಿದ್ದ ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳನ್ನು ಎಗರಿಸಿರುವ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಧರ್ಮನಗರದಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಅಪ್ರಾಪ್ತರು ಸೇರಿ ಐದು ಮಂದಿಯನ್ನ ಬಂಧಿಸಿದ್ದಾರೆ.
ಘಟನೆ ವಿವರ:
ಧರ್ಮನಗರ ನಿವಾಸಿ ಶ್ರೀಧರ್ ಅವರ ಮನೆ ಯಲ್ಲಿ ಜೂನ್ 8ರ ಬೆಳಗ್ಗೆ 8 ಗಂಟೆಯಿಂದ 16ರ ಮಧ್ಯಾಹ್ನ 12 ಗಂಟೆಯ ನಡುವೆ ಚಿನ್ನಾಭರಣ ಕಳವಾಗಿತ್ತು. ಈ ಬಗ್ಗೆ ಉಳ್ಳಾಲ ಠಾಣೆಗೆ ಉಳ್ಳಾಲಬೈಲಿನ ಧರ್ಮನಗರ ನಿವಾಸಿ ಶ್ರೀಧರ್ (65) ದೂರು ನೀಡಿದ್ದರು. ಮನೆಯ ಬೆಡ್ ರೂಮಿನ ಕಪಾಟಿನಲ್ಲಿರಿಸಿದ್ದ ಸ್ಟೀಲಿನ ಡಬ್ಬದಲ್ಲಿ ಇಟ್ಟಿದ್ದ ಚಿನ್ನದ ಕರಿಮಣಿ ಸರ, ನೆಕ್ಲಸ್, ಚೈನ್, ಬ್ರಾಸ್ ಲೈಟ್, ಉಂಗುರಗಳು, ಕಿವಿ ಓಲೆಗಳು, ಕೈಬಳೆಗಳು ಸೇರಿದಂತೆ ಅಂದಾಜು 15 ಲಕ್ಷಕ್ಕೂ ಹೆಚ್ಚು ಮೌಲ್ಯದ 32 ಪವನ್ ಗಿಂತಲೂ ಹೆಚ್ಚು ತೂಕದ ಚಿನ್ನದ ಆಭರಣಗಳನ್ನು ಕಳವುಗೈದ ಬಗ್ಗೆ ದೂರಿನಲ್ಲಿ ತಿಳಿಸಿದ್ದರು.
ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಕೈಗೊಂಡ ಉಳ್ಳಾಲ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಅವರ ನೇತೃತ್ವದ ತಂಡ, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಪೊಲೀಸ್ ಉಪ ಆಯುಕ್ತ ಸಿದ್ಧಾರ್ಥ ಗೋಯಲ್, ಪೊಲೀಸ್ ಉಪ ಆಯುಕ್ತ ಬಿ.ಪಿ. ದಿನೇಶ್ ಕುಮಾರ್ ಹಾಗೂ ಎ.ಸಿ.ಪಿ. ದಕ್ಷಿಣ ಧನ್ಯ ನಾಯಕ್ ಅವರ ಮಾರ್ಗದರ್ಶನ ಹಾಗೂ ನಿರ್ದೇಶನದಂತೆ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಬಾಲಕರು ಸೇರಿದಂತೆ ಆರೋಪಿಗಳಾದ ಶ್ರೇಯಸ್ಸ್ ಬೆಳ್ತಂಗಡಿ, ಪೃಥ್ವಿರಾಜ್ ಉರ್ವ ಮತ್ತು ತೌಸೀಫ್ ಬೆಳ್ತಂಗಡಿರವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದು, ಈ ಸಂದರ್ಭ ಅವರು ಚಿನ್ನಾಭರಣ ಕಳವುಗೈದು ಅಂಗಡಿಗಳಿಗೆ ಮಾರಾಟ ಮಾಡಿದ್ದು ಬೆಳಕಿಗೆ ಬಂದಿತ್ತು. ಆರೋಪಿಗಳು ಕಳವು ಮಾಡಿ ಮಂಗಳೂರು ನಗರದ ವಿವಿಧ ಚಿನ್ನಾಭರಣ ಅಂಗಡಿಗಳಿಗೆ ಮಾರಾಟ ಮಾಡಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ಉಳ್ಳಾಲ ಪೊಲೀಸರು ಆರೋಪಿಗಳಾದ ಶ್ರೇಯಸ್ಸ್ ಬೆಳ್ತಂಗಡಿ, ಪೃಥ್ವಿರಾಜ್ ಉರ್ವ ಮತ್ತು ತೌಸೀಫ್ ಬೆಳ್ತಂಗಡಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಅವರುಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.