
Mangalore: ಕಾನೂನಿನ ಬಗ್ಗೆ ಅರಿವು ಇರಬೇಕಾದ ಅಗತ್ಯವಿದೆ: ಡಾ. ವೀರೇಂದ್ರ ಹೆಗ್ಗಡೆ
ಮಂಗಳೂರು: ನ್ಯಾಯಾಂಗದಲ್ಲಿ ನಂಬಿಕೆ ಜತೆಗೆ ಕಾನೂನಿನ ಬಗ್ಗೆ ಅರಿವು ಇರಬೇಕಾದ ಅಗತ್ಯವಿದೆ ಎಂದು ರಾಜ್ಯಸಭಾ ಸದಸ್ಯ, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಭಾನುವಾರ ಮೂಡುಬಿದಿರೆಯ ವಕೀಲೆ ನೋಟರಿ ಡಾ.ಅಕ್ಷತಾ ಆದರ್ಶ್ ಅವರ ‘ಸರಳ ಕಾನೂನುಗಳ ಅರಿವಿಲ್ಲದೆ ಮೋಸ ಹೋಗದಿರಿ’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನ್ಯಾಯ ಮನುಷ್ಯರಿಗೆ ಮಾತ್ರವಲ್ಲ, ಎಲ್ಲ ಜೀವಗಳಿಗೂ ಸಿಗಬೇಕು. ಈಗ ಹೆಚ್ಚಿನ ಸಂದರ್ಭಗಳಲ್ಲಿ ನಂಬಿಕೆ, ವಿಶ್ವಾಸವನ್ನು ಕಳೆದುಕೊಳ್ಳುವ ಜತೆಗೆ ಮಾತಿಗೆ ತಪ್ಪುವ ವಿದ್ಯಮಾನಗಳನ್ನು ಕಾಣುತ್ತೇವೆ. ದಾಖಲೆ ರಹಿತವಾಗಿ ವ್ಯವಹಾರ ನಡೆಸಿ ಮೋಸ ಹೋಗುವ, ಮೋಸ ಮಾಡುವ ಘಟನೆಗಳೂ ನಡೆಯುತ್ತಿವೆ. ತೆರಿಗೆ ತಪ್ಪಿಸಲು ದಾಖಲೆ ರಹಿತ ವ್ಯವಹಾರ ನಡೆಸುತ್ತಾರೆ. ಬಳಿಕ ಮಾತು ತಪ್ಪಿದರೆ, ವಿಶ್ವಾಸ ಕಳೆದುಕೊಂಡು ಪರಿತಪಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಸೂಕ್ತ ಕಾನೂನು ತಿಳಿವಳಿಕೆ ನೀಡಬೇಕು. ನ್ಯಾಯವಾದಿಗಳಲ್ಲಿ ಕಾನೂನಿನ ಬಗ್ಗೆ ಮಾಹಿತಿ ಪಡೆದು ಮುಂದುವರಿಯಬೇಕು. ಕಾನೂನಿನ ಪರಿಮಿತಿಗೆ ಒಳಪಟ್ಟು ವ್ಯವಹರಿಸಬೇಕು ಎಂದು ಅವರು ಆಶಿಸಿದರು.
ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷೆ ಡಾ.ಮೋಹನ ಆಳ್ವ ಮಾತನಾಡಿ, ಪ್ರಸಕ್ತ ಎಲ್ಲರದಲ್ಲೂ ಕಾನೂನು ಹಾಸುಹೊಕ್ಕಾಗಿರುವುದರಿಂದ ಕಾನೂನಿನ ಜ್ಞಾನ ಹೊಂದಿರಬೇಕಾದ್ದು ಅಗತ್ಯ. ಇದರೊಂದಿಗೆ ವ್ಯಕ್ತಿಗಳ ಹಕ್ಕು ಮತ್ತು ಕರ್ತವ್ಯ ಜೊತೆಯಾಗಿ ಸಾಗಬೇಕು. ಕಾನೂನು ಮತ್ತು ನ್ಯಾಯದ ನಡುವಿನ ಅಂತರ ಜಾಸ್ತಿ ಆಗಬಾರದು. ದೇಶದಲ್ಲಿ ಸತ್ಯ, ಧರ್ಮ, ನ್ಯಾಯಕ್ಕೆ ಗೌರವ ನೀಡುತ್ತಾರೆ, ವಿದೇಶಗಳಲ್ಲಿ ನ್ಯಾಯಕ್ಕೆ ಮೊದಲ ಸ್ಥಾನ. ಸತ್ಯ, ಧರ್ಮಕ್ಕೆ ಎರಡನೇ ಸ್ಥಾನ ನೀಡುತ್ತಾರೆ. ಇಂತಹ ವೈಪರೀತ್ಯಗಳ ಬಗ್ಗೆ ಪ್ರಜ್ಞಾವಂತರು ಚಿಂತಿಸಬೇಕಾಗಿದೆ ಎಂದರು.
ಮಂಗಳೂರು ವಕೀಲರ ಸಂಘ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಮಾತನಾಡಿ, ಜೀವನದಲ್ಲಿ ಕಾನೂನು ಸುತ್ತುತ್ತಾ ಇರುತ್ತದೆ. ಕಾನೂನಿನ ಅರಿವಿಗಾಗಿ ಈ ಪುಸ್ತಕ ಪ್ರತಿಯೊಬ್ಬರಲ್ಲೂ ಇರಬೇಕು. ಕಾನೂನಿನ ಮಾಹಿತಿ ಇದ್ದರೆ ಯಾರೂ ತಪ್ಪುದಾರಿಗೆ ಎಳೆಯಲು ಸಾಧ್ಯವಿಲ್ಲ ಎಂದರು.
ಹಿರಿಯರಾದ ಧರ್ಮರಾಜ್ ಜೈನ್ ಮಾತನಾಡಿ, ಸಣ್ಣಪುಟ್ಟ ವಿಚಾರಗಳಲ್ಲೂ ಮೋಸ ಹೋಗುವ ಇಂದಿನ ದಿನಗಳಲ್ಲಿ ಶಿಸ್ತು, ಜೀವನ ಮೌಲ್ಯ, ಧರ್ಮಗಳನ್ನು ಪಾಲಿ ಸಬೇಕು ಎಂದರು.
ಮೂಡುಬಿದಿರೆ ಜೈನ್ ಕಾಲೇಜು ಪ್ರಾಂಶುಪಾಲ ಪ್ರೊ. ಪ್ರಭಾತ್ ಬಲ್ನಾಡ್ ಕೃತಿಯ ಬಗ್ಗೆ ಮಾತನಾಡಿ, ಬದುಕಿನ ಎಲ್ಲ ಸಂಗತಿಗಳು ಇದರಲ್ಲಿ ಅಡಕವಾಗಿದೆ. ಕಾನೂನಿನ ತಿಳಿವಳಿಕೆ ಬಗ್ಗೆ ಪರಾಮರ್ಶ ಗಂಥವಾಗಿದ್ದು, ಆಡು ಭಾಷೆಯಲ್ಲಿ ಸರಳವಾಗಿ ಅರ್ಥವಾಗುವಂತೆ ಬರೆಯಲಾಗಿದೆ ಎಂದರು.
ಕೃತಿಕಾರ ಡಾ.ಅಕ್ಷತಾ ಆದರ್ಶ್ ಅವರು ಪ್ರಾಸ್ತಾವಿಕದಲ್ಲಿ ಕೃತಿ ರಚನೆಯ ಬಗೆ ವಿವರಿಸಿದರು. ಕಾನೂನು ಗೊತ್ತಿಲ್ಲ ಎಂದರೆ ಕ್ಷಮೆ ಇಲ್ಲ, ಕಾನೂನು ಇಲ್ಲದೆ ಬದುಕು ಕಷ್ಟ ಎಂದರು.
ಡಾ.ಆಕಾಶ್ ಜೈನ್ ಸ್ವಾಗತಿಸಿ, ಆದರ್ಶ್ ಜೈನ್ ವಂದಿಸಿದರು.