ಕುಂಭದ್ರೋಣ ಮಳೆಗೆ ತತ್ತರಿಸಿದ ಕುಕ್ಕೆ ಕ್ಷೇತ್ರ ಸುಬ್ರಹ್ಮಣ್ಯ-ಪುತ್ತೂರು ರಸ್ತೆ ಬ್ಲಾಕ್: ಅಂಗಡಿಗಳು ಜಲಾವೃತ
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕುಮಾರಧಾರ ನದಿ ಉಕ್ಕಿಹರಿಯುತ್ತಿದ್ದು ಅಪಾಯ ಮಟ್ಟದಲ್ಲಿದೆ. ಅಲ್ಲದೆ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ. ಕುಮಾರಧಾರ ನದಿಯ ಉಪ ನದಿ ದರ್ಪಣತೀರ್ಥ ನದಿ ಕೂಡ ತುಂಬಿ ಹರಿಯುತ್ತಿರುವುದರಿಂದ ಶುಕ್ರವಾರ ಮುಂಜಾನೆ ವೇಳೆ ಎರಡು ನದಿಗಳ ಹರಿವು ಹೆಚ್ಚಾಗಿ ನೀರು ಹೆದ್ದಾರಿಯನ್ನು ಆವರಿಸಿತು.ಈ ಕಾರಣದಿಂದ ಸುಬ್ರಹ್ಮಣ್ಯ-ಪುತ್ತೂರು ರಸ್ತೆ ಬ್ಲಾಕ್ ಆಗಿ ಸಂಚಾರ ಸ್ಥಗಿತಗೊಂಡಿತು.
ಶ್ರೀ ದೇವರ ಜಳಕದ ಕಟ್ಟೆ ಮುಳುಗಡೆ:
ಸುಬ್ರಹ್ಮಣ್ಯ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಪುಣ್ಯ ನದಿ ಕುಮಾರಧಾರವು ಭಾರೀ ಪ್ರವಾಹದಿಂದ ಹರಿಯುತ್ತಿದೆ.ಕುಮಾರಧಾರ ಸ್ನಾನಘಟ್ಟ ಕಳೆದ ಐದು ದಿನಗಳಿಂದ ಮುಳುಗಡಯಾಗಿಯೇ ಇದೆ. ನದಿ ತೀರದಲ್ಲಿರುವ ಶ್ರೀ ದೇವರ ಜಳಗದ ಕಟ್ಟೆಯು ನದಿಯ ಪ್ರವಾಹದಿಂದ ಮುಳುಗಡೆಗೊಂಡಿದೆ.ಅಲ್ಲದೆ ಇಲ್ಲಿ ಶೌಚಾಲಯ ಕಟ್ಟಡವು ಮುಕ್ಕಾಲು ಭಾಗ ಮುಳುಗಡೆಗೊಂಡಿದ್ದು ಛಾವಣಿ ಮಾತ್ರ ಗೋಚರಿಸುತ್ತಿದೆ.ಇಲ್ಲಿ ಡ್ರೆಸ್ಸಿಂಗ್ ಕೊಠಡಿಗಳು ಸಂಪೂರ್ಣ ಮುಳುಗಡೆಗೊಂಡಿದೆ.
ಲಗೇಜ್ ಕೊಠಡಿ, ಅಂಗಡಿಗಳು ಜಲಾವೃತ:
ಕುಮಾರಧಾರ ನದಿಯ ಪ್ರವಾಹವು ಶುಕ್ರವಾರ ವಿರೀತವಾಗಿ ಏರುತ್ತಿದೆ. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ನದಿಯು ಕುಮಾರಧಾರ ವೃತ್ತದ ಸಮೀಪ ಬಂದಿದೆ. ಸ್ನಾನಘಟ್ಟದಿಂದ ಸುಮಾರು ೧೦೦ಮೀ.ಗೂ ಅಧಿಕ ದೂರ ನೀರು ವ್ಯಾಪಿಸಿದ್ದು, ಕುಮಾರಧಾರ ಧ್ವಾರದ ತನಕ ನೀರು ಆಗಮಿಸುವ ನಿರೀಕ್ಷೆ ಇದೆ. ಇದರಿಂದಾಗಿ ಅಕ್ಕ ಪಕ್ಕದ ಮನೆಯವರು ಆತಂಕಿತರಾಗಿದ್ದಾರೆ.ಅಲ್ಲದೆ ಕುಮಾರಧಾರದ ಲಗೇಜ್ ಕೊಠಡಿಯ ಕಟ್ಟಡವು ಜಲಾವೃತವಾಗಿದೆ.ಇಲ್ಲಿನ ಅಂಗಡಿ ಮುಂಗಟ್ಟುಗಳು ಜಲಾವೃತ್ತವಾಗಿದ್ದು ಅಂಗಡಿಯ ಒಳಗೆ ನೀರು ನುಗ್ಗಿದೆ. ಸ್ನಾಘಟ್ಟದ ಸಮೀಪವಿದ್ದ ಅಂಗಡಿಯು ಸಂಪೂರ್ಣ ಮುಳುಗಡೆಗೊಂಡಿದೆ.
ತೋಟ ಜಲಾವೃತ:
ಕುಮಾರಧಾರ ನದಿಯ ಪ್ರವಾಹದಿಂದಾಗಿ ದೋಣಿಮಕ್ಕಿ, ಕುಲ್ಕುಂದ ಕಾಲನಿ, ನೂಚಿಲ ಬೈಲು, ಕುದುರೆಮಜಲು, ಕುಮಾರಧಾರ ಮೊದಲಾದ ಕಡೆ ತೋಟಗಳಿಗೆ ನೀರು ನುಗ್ಗಿದೆ.ಶುಕ್ರವಾರ ಮುಂಜಾನೆಯಿಂದ ನೀರು ನುಗ್ಗಿದ್ದು ತೋಟಕ್ಕೆ ಹಾಕಿದ ಗೊಬ್ಬರವು ನೀರುಪಾಲಾಗಿದೆ.ಅಲ್ಲದೆ ತೋಟದಲ್ಲಿನ ಅಡಿಕೆ,ತೆಂಗಿನ ಫಲಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.ತೋಟದಲ್ಲಿ ನೀರು ಶೇಖರಣೆಯಾದ ಕಾರಣ ಬಾಳೆಗಿಡಗಳು ಧರಾಶಾಹಿಯಾಗಿದೆ.
ಭಾಗಶಃ ದ್ವೀಪವಾದ ದೋಣಿಮಕ್ಕಿ:
ದರ್ಪಣ ತೀರ್ಥ ನದಿಯಲ್ಲಿ ಪ್ರವಾಹ ಉಕ್ಕಿದ ಕಾರಣ ಸುಬ್ರಹ್ಮಣ್ಯದ ಕುಮಾರಧಾರದ ದೋಣಿಮಕ್ಕಿ ಪರಿಸರವು ಬಾಗಶಃ ದ್ವೀಪವಾಯಿತು. ಇಲ್ಲಿಗೆ ತೆರಳುವ ರಸ್ತೆಯು ಸಂಪೂರ್ಣವಾಗಿ ಜಲಾವೃತವಾಯಿತು.ಅಲ್ಲದೆ ಇಲ್ಲಿನ ಮನೆಗಳಿಗೆ ನೀರು ನುಗ್ಗಿದೆ.ಇದರಿಂದಾಗಿ ಈ ಭಾಗದ ಸುಮಾರು ೪೦ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಕಿಟ್ಟಣ್ಣ ರೈ, ಮೋಹನದಾಸ ರೈ, ರವಿಕಕ್ಕೆಪದವು, ಗಿರಿಯಪ್ಪ ಗೌಡ, ದಿನೇಶ್, ಮೋನಪ್ಪ.ಡಿ, ಸುಬ್ರಹ್ಮಣ್ಯ ಕೆ.ಯು, ಹಲ್ಕುರೆ ಗೌಡ, ಉದಯ ಕುಮಾರ್, ಶೇಷಪ್ಪ ಗೌಡ, ಮೊದಲಾದ ಮನೆಯವರು ಸಂಕಷ್ಠ ಎದುರಿಸಬೇಕಾಯಿತು.
