ಸುಳ್ಯದಲ್ಲಿ ಎಡೆಬಿಡದೆ ಸುರಿದ ಧಾರಾಕಾರ ಮಳೆ: ಹೋಟೆಲ್-ಅಂಗಡಿಗಳಿಗೆ ನುಗ್ಗಿದ ನೀರು
Friday, July 19, 2024
ಸುಳ್ಯ: ಸುಳ್ಯದಲ್ಲಿ ಭಾರೀ ಮಳೆಯಾಗಿದೆ. ಶುಕ್ರವಾರ ಬೆಳಿಗ್ಗಿನಿಂದ ಎಡೆಬಿಡದೆ ಮಳೆ ಸುರಿಯಿತು. ದಿನಪೂರ್ತಿ ಧಾರಾಕಾರ ಸುರಿದ ಮಳೆ ಸಂಜೆಯ ವೇಳೆಗೆ ಸ್ವಲ್ಪ ಬಿಡುವು ನೀಡಿತು. ಕತ್ತಲು ಕವಿದ ವಾತಾವರಣವಿದ್ದು ನಿರಂತರ ಮಳೆಯಾಯಿತು. ಸುಳ್ಯ ನಗರದ ಹೋಟೆಲ್, ಅಂಗಡಿಗಳಿಗೆ ನೀರು ನುಗ್ಗಿತು. ಜಟ್ಟಿಪಳ್ಳ ಕ್ರಾಸ್‌ನ ಹೋಟೆಲ್‌ಗೆ ಮಳೆ ನೀರು ನುಗ್ಗಿದ್ದು ಅಸ್ತವ್ಯಸ್ತವಾಗಿದೆ. ಇಲ್ಲಿ ಹೋಟೆಲ್ ಒಳಗೆ ಮಳೆ ನೀರು ಸೇರಿದ್ದು ಕೆರೆಯಂತಾಗಿದೆ.
ಗುರುವಾರ ರಾತ್ರಿಯೂ ಉತ್ತಮ ಮಳೆಯಾಗಿದೆ. ಶುಕ್ರವಾರ ಬೆಳಿಗ್ಗೆ 8 ಗಂಟೆಯ ತನಕ 24 ಗಂಟೆಯಲ್ಲಿ ಸುಳ್ಯ ನಗರದಲ್ಲಿ 142 ಮಿ.ಮಿ. ಮಳೆ ಸುರಿದಿದೆ ಸುಳ್ಯ ತಾಲೂಕಿನ ವಿವಿಧ ಗ್ರಾಮಗಳಲ್ಲಿ 100 ಮಿ.ಮಿ.ಗಿಂತ ಅಧಿಕ ಮಳೆ ಸುರಿದಿದೆ. ಸುಳ್ಯದಲ್ಲಿ ಧಾರಾಕಾರವಾಗಿ ಸುರಿಯುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿತ್ತು ಜನರು ಹೊರಬರಲು ಆಗದ ರೀತಿಯಲ್ಲಿ ಮಳೆ ಸುರಿಯಿತು. ಸುಳ್ಯ ನಗರದಲ್ಲಿ ಮಳೆ ನೀರು, ಕೆಸರು ನೀರು ರಸ್ತೆಯಲ್ಲಿಯೇ ಹರಿಯುತಿದೆ.
ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಾರಣ ಮುಖ್ಯ ರಸ್ತೆ ಸೇರಿ ಬಹುತೇಕ ಕಡೆಗಳಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿಯುತಿದೆ. ವಾಹನಗಳು ಸಂಚಾರ ಮಾಡುವಾಗ ದ್ವಿಚಕ್ರ ವಾಹನ ಸವಾರರ ಮೇಲೆ ಪಾದಾಚಾರಿಗಳ ಮೇಲೆ ಕೆಸರು ಮಿಶ್ರಿತ ಮಳೆ ನೀರು ಸಿಂಚನ ಆಗುತಿದೆ.




