ಖಾಸಗಿ ರಂಗದಲ್ಲಿ ಸ್ಥಳೀಯರಿಗೆ ಉದ್ಯೋಗ ಒದಗಿಸುವ ಮಸೂದೆಗೆ ಉದ್ಯಮಿಗಳ ಆಕ್ಷೇಪಕ್ಕೆ ಡಿವೈಎಫ್‌ಐ ಖಂಡನೆ
ಬೆಂಗಳೂರು: ಕರ್ನಾಟಕ ಸರಕಾರ ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ.75 ಮೀಸಲಾತಿ ನಿಗದಿಪಡಿಸುವ ಕರಡು ಮಸೂದೆಗೆ ಕರ್ನಾಟಕದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಕರ್ನಾಟಕ ರಾಜ್ಯ ಸಮಿತಿಯು ಸ್ವಾಗತಿಸುತ್ತದೆ. ಆದರೆ ಖಾಸಗಿ ಕಂಪೆನಿಗಳ ಆಕ್ಷೇಪದ ನೆಪವೊಡ್ಡಿ ಸ್ವತಃ ಸರಕಾರವೇ ಮಸೂದೆಯನ್ನು ತಡೆ ಹಿಡಿದಿರುವುದನ್ನು ಬಲವಾಗಿ ಖಂಡಿಸುತ್ತದೆ.
ಸ್ಥಳೀಯರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ಆಯೋಗ ವರದಿ ನೀಡಿ ಹಲವು ದಶಕಗಳೇ ಕಳೆದಿವೆ. ಹತ್ತಾರು ವರ್ಷಗಳಿಂದ ಡಿವೈಎಫ್‌ಐ ಸೇರಿದಂತೆ ನಾಡಿನ ಜನಪರ ಸಂಘಟನೆಗಳು ಸ್ಥಳೀಯರಿಗೆ ಉದ್ಯೋಗ ಖಾತ್ರಿಪಡಿಸಲು ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟಗಳನ್ನು ನಡೆಸುತ್ತಲೇ ಬಂದಿವೆ. ಇದೀಗ ಕರ್ನಾಟಕ ಸರಕಾರ ಸ್ಥಳೀಯರಿಗೆ ಉದ್ಯೋಗ ಒದಗಿಸುವ ಮಸೂದೆ ಮಂಡಿಸಲು ಮುಂದಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಖಾಸಗಿ ಕಂಪೆನಿಗಳ ನಡೆಯು ಕರ್ನಾಟಕದ ಜನರಿಗೆ ಅದರಲ್ಲೂ ಉದ್ಯೋಗಕ್ಕಾಗಿ ಹಂಬಲಿಸುತ್ತಿರುವ ರಾಜ್ಯದ ಯುವಜನರಿಗೆ ಮಾಡುತ್ತಿರುವ ಮಹಾದ್ರೋಹವಾಗಿದೆ.
ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಲ್ಲಿ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಶೇ.75 ಮೀಸಲಾತಿ ನಿಗದಿಪಡಿಸಲು ಸರಕಾರ ಮುಂದಾಗಿರುವುದಾಗಿ ಈಗ ತಡೆ ಹಿಡಿದಿರುವ ಮಸೂದೆಯಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದು, ಇದನ್ನು ಡಿವೈಎಫ್‌ಐ ರಾಜ್ಯ ಸಮಿತಿಯು ತೀವ್ರವಾಗಿ ವಿರೋಧಿಸುತ್ತದೆ. ಆಡಳಿತಾತ್ಮಕ ಹುದ್ದೆಗಳಲ್ಲಿ ಕನಿಷ್ಠ ಶೇ. 75 ಹಾಗೂ ಆಡಳಿತಾತ್ಮಕವಲ್ಲದ (ಸಿ ಮತ್ತು ಡಿ ದರ್ಜೆಯ) ಎಲ್ಲ ಹುದ್ದೆಗಳಲ್ಲಿ ಶೇ.100 ಸ್ಥಳೀಯರಿಗೆ ಅವಕಾಶ ಸಿಗುವಂತೆ ಕಾಯಿದೆ ಮಾಡುವಂತೆ ಆಗ್ರಹಿಸುತ್ತದೆ.
ಪ್ರಸ್ತಾವಿತ ಕಾನೂನು ಸರಿಯಾಗಿ ಪಾಲನೆ ಆಗದೇ ಇದ್ದರೆ ಅಥವಾ ಕಾನೂನನ್ನು ಉಲ್ಲಂಘಿಸಿದರೆ ಕನಿಷ್ಠ 10,000 ರೂ.ನಿಂದ ಗರಿಷ್ಠ 25,000 ರೂ.ವರೆಗೆ ಅತ್ಯಂತ ಕಡಿಮೆ ದರದ ದಂಡವನ್ನು ನಿಗದಿಪಡಿಸಲಾಗಿದೆ. ಕಾನೂನಿನ ಉಲ್ಲಂಘನೆ ಮುಂದುವರಿದರೆ ದಂಡದ ಮೊತ್ತವನ್ನು 1 ಲಕ್ಷ ರೂ.ವರೆಗೆ ಹೆಚ್ಚಿಸಲಾಗುತ್ತದೆ. ಈ ಉಲ್ಲಂಘನೆಗೆ ಜೈಲು ಶಿಕ್ಷೆಯ ಬಗ್ಗೆ ಪ್ರಸ್ತಾವಿತ ಮಸೂದೆಯಲ್ಲಿ ಪ್ರಸ್ತಾಪಿಸದಿರುವುದರಿಂದಾಗಿ ಲೋಪವುಂಟಾಗಿದೆ. ಸ್ಥಳೀಯರಿಗೆ ಉದ್ಯೋಗ ಒದಗಿಸುವ ಗಂಭೀರವಾದ ಈ ಕಾನೂನನ್ನು ಉಲ್ಲಂಘಿಸುವವರಿಗೆ ಹಾಗೂ ಸಮರ್ಪಕವಾಗಿ ಪಾಲಿಸದವರಿಗೆ ದಂಡದ ಮೊತ್ತವನ್ನು ಹೆಚ್ಚಳ ಮಾಡಬೇಕು. ಈ ಕಾನೂನು ಉಲ್ಲಂಘಿಸಿ ಉದ್ಯೋಗ ನಿರಾಕರಿಸಿದರೆ ಅಂತಹ ಅಪರಾಧಕ್ಕಾಗಿ ಜೈಲು ಶಿಕ್ಷೆಯಂತಹ ಕಠಿಣ ಕ್ರಮವನ್ನು ಸರಕಾರ ನಿಗದಿಪಡಿಸಬೇಕು. ಆಗ ಮಾತ್ರ ಈ ಕಾನೂನಿಗೆ ಬಲ ಬರುತ್ತದೆ. ಇಲ್ಲವಾದಲ್ಲಿ ಖಾಸಗಿ ಕಂಪೆನಿಗಳು ಇದರ ದುರ್ಲಾಭ ಪಡೆಯುವ ಅಪಾಯವಿದೆ ಎಂದು ಡಿವೈಎಫ್‌ಐ ಆತಂಕ ವ್ಯಕ್ತಪಡಿಸುತ್ತದೆ.
ಖಾಸಗಿ ರಂಗದಲ್ಲಿ ಮೀಸಲಾತಿ ಖಾತ್ರಿಪಡಿಸಿ:
ಖಾಸಗಿ ಕೈಗಾರಿಕೆಗಳು, ಕಂಪೆನಿಗಳಲ್ಲಿ ಸ್ಥಳೀಯರಿಗೆ ಅವಕಾಶ ಒದಗಿಸಿದಂತೆ ಖಾಸಗೀ ರಂಗದ ಎಲ್ಲ ಹುದ್ದೆಗಳಿಗೆ ಸರಕಾರಿ ವ್ಯವಸ್ಥೆಯಲ್ಲಿರುವಂತೆ ಮೀಸಲಾತಿಯನ್ನು ಜಾರಿಗೆ ತರಲು ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಆ ಮೂಲಕ ಅವಕಾಶ ವಂಚಿತ ಸಮುದಾಯಗಳ ಯುವಜನರಿಗೆ ಉದ್ಯೋಗ ಹಕ್ಕು ಖಾತ್ರಿಪಡಿಸಲು ಅಗತ್ಯ ಕಾನೂನು ರೂಪಿಸಲು ಮುಂದಾಗಬೇಕು ಹಾಗೂ ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿಯು ಒತ್ತಾಯಿಸಿದೆ.