
Udupi: ಕಾಂಗ್ರೆಸ್ಸಿನ ಹಿಂದೂ ವಿರೋಧಿ ಮನಃಸ್ಥಿತಿ ಬಯಲು: ಕಿಶೋರ್ ಕುಮಾರ್ ಕುಂದಾಪುರ
ಉಡುಪಿ: ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ’ತಮ್ಮನ್ನು ತಾವು ಹಿಂದೂಗಳು ಎಂದು ಕರೆಸಿಕೊಳ್ಳುವವರು ೨೪ ಗಂಟೆ ದ್ವೇಷ, ಹಿಂಸೆ ಮತ್ತು ಸುಳ್ಳಿನಲ್ಲಿ ನಿರತರಾಗಿದ್ದಾರೆ’ ಎಂಬ ದುರುದ್ದೇಶಪೂರಿತ ಮಾತನ್ನಾಡುವ ಮೂಲಕ ಕಾಂಗ್ರೆಸ್ಸಿನ ಹಿಂದೂ ವಿರೋಧಿ ಮನಃಸ್ಥಿತಿಯನ್ನು ಮಗದೊಮ್ಮೆ ಬಟಾಬಯಲುಗೊಳಿಸಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಹಿಂದೂ ವೇಷಧಾರಿಯಾಗಿ ದೇವಸ್ಥಾನಗಳನ್ನು ಸುತ್ತುವ ರಾಹುಲ್ ಗಾಂಧಿ ತನ್ನ ಅಪ್ರಬುದ್ಧ ಮಾತುಗಳಿಂದ ಕಪಟತನವನ್ನು ಪ್ರದರ್ಶಿಸಿ ಜಗತ್ತಿನ ಮುಂದೆ ಬೆತ್ತಲಾಗಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಇತರ ಯಾರನ್ನೂ ದೂಷಿಸದೆ ಕೇವಲ ಹಿಂದೂಗಳನ್ನು ಮಾತ್ರ ಗುರಿಯಾಗಿಸಿ ಅವಮಾನಿಸಿರುವುದು ಕಾಂಗ್ರೆಸ್ಸಿನ ಕೀಳು ಸಂಸ್ಕೃತಿಯನ್ನು ಬಿಂಬಿಸುತ್ತದೆ.
ದೇಶ ವಿಭಜನೆ ಸಂಧರ್ಭದಲ್ಲಿ ನಡೆದ ಲಕ್ಷಾಂತರ ಹಿಂದೂಗಳ ಹತ್ಯೆ ಮತ್ತು ಕಾಶ್ಮೀರದಲ್ಲಿ ನಡೆದ ಅಸಂಖ್ಯಾತ ಹಿಂದೂಗಳ ಮಾರಣ ಹೋಮಕ್ಕೆ ಯಾರು ಕಾರಣ ಎಂಬ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಹಿಂದೂಗಳ ಬಗ್ಗೆ ಅತೀವ ದ್ವೇಷ ಭಾವನೆ ಹೊಂದಿರುವ ಕಾಂಗ್ರೆಸ್ಸಿನ ಹಿಂದೂ ದಮನ ನೀತಿಯನ್ನು ದೇಶವಾಸಿಗಳು ಚೆನ್ನಾಗಿಯೇ ಅರಿತಿದ್ದಾರೆ.
ದೇಶದ ಸಂವಿಧಾನದ ಬಗ್ಗೆ ಮಾತಾಡುವ ರಾಹುಲ್ ಗಾಂಧಿ, ಸಂವಿಧಾನ ತಿದ್ದುಪಡಿ ಮಾಡಿ ಅದರಲ್ಲಿ ’ಜಾತ್ಯತೀತ’ ಪದ ಸೇರ್ಪಡೆಗೊಳಿಸಿದವರು ಯಾರು ಎಂಬ ಬಗ್ಗೆ ಆಳವಾದ ಅಧ್ಯಯನ ನಡೆಸುವುದು ಉತ್ತಮ. ರಾಜ್ಯದ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಸಹಿತ ದೇಶದೆಲ್ಲೆಡೆ ನಡೆಯುತ್ತಿರುವ ದೊಂಬಿ, ಹತ್ಯೆ, ಅಹಿಂಸೆಗೆ ಕುಮ್ಮಕ್ಕು ನೀಡುತ್ತಿರುವವರು ಯಾರು ಎಂಬ ಬಗ್ಗೆಯೂ ರಾಹುಲ್ ಗಾಂಧಿ ಗಂಭೀರ ಚಿಂತನೆ ನಡೆಸಿ ತನ್ನ ಪ್ರಬುದ್ಧತೆ ಹೆಚ್ಚಿಸಿಕೊಳ್ಳುವುದು ಉತ್ತಮ ಎಂದು ಕಿಶೋರ್ ಕುಮಾರ್ ಸಲಹೆ ನೀಡಿದ್ದಾರೆ.