
Udupi: ಹಣಕ್ಕಾಗಿ ವ್ಯಕ್ತಿಯ ಅಪಹರಣ
ಉಡುಪಿ: ಮಣಿಪಾಲ ಸಮೀಪ ನಡುರಸ್ತೆಯಲ್ಲಿ ಗರುಡ ಗ್ಯಾಂಗ್ ನಡೆಸಿದ ಗ್ಯಾಂಗ್‌ವಾರ್ ಘಟನೆ ಮರೆಯುವ ಮುನ್ನವೇ ಮತ್ತೊಂದು ದಾಂಧಲೆ, ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ.
ಗಾಂಜಾ ಮಾರಾಟ ಬಗ್ಗೆ ಹಫ್ತಾ ನೀಡುವಂತೆ ಒತ್ತಾಯಿಸಿ ಯುವಕನಿಗೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ಉದ್ಯಾವರ ಕಂಪನಬೆಟ್ಟು ನಿವಾಸಿ ಮೊಹಮ್ಮದ್ ಪರ್ವೇಜ್ ಉಮರ್ (25)ಗೆ ಪರಿಚಯದವನಾದ ಪೈಝಲ್ ಎಂಬಾತ ಕರೆ ಮಾಡಿ ‘ನಿನ್ನ ಬಳಿ ಮಾತನಾಡಲು ಇದೆ ಬಾ’ ಎಂದು ಮಣಿಪಾಲಕ್ಕೆ ಕರೆಸಿಕೊಂಡಿದ್ದಾನೆ. ಪೈಝಲ್ ಜೊತೆಗೆ ದಾವುದ್ ಇಬ್ರಾಹಿಂ ಮತ್ತು ಇಸಾಕ್ ಮೂವರು ಪರ್ವೇಜ್ ಉಮರ್‌ನನ್ನು ಬಲತ್ಕಾರದಿಂದ ಕಾರಿನಲ್ಲಿ ಎಳೆದು ಹಾಕಿಕೊಂಡು ಅಪರಿಚಿತ ಜಾಗಕ್ಕೆ ಕೊಂಡೊಯ್ದು, ಮಣಿಪಾಲದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಮಾಮೂಲಿ ಹಣ ನೀಡಬೇಕು ಇಲ್ಲವಾದರೆ ಜೀವಂತ ಬಿಡುವುದಿಲ್ಲ ಎಂದು ಧಮ್ಕಿ ಹಾಕಿ, ಹಲ್ಲೆ ನಡೆಸಿದ್ದಾರೆ.
ಅವರ ಮಾತಿಗೆ ಒಪ್ಪಿದ ಪರ್ವೇಜ್‌ನನ್ನು ಗುರುವಾರ ಬೆಳಗಿನ ಜಾವ ಆತನ ಮನೆ ಬಳಿ ಬಿಟ್ಟು ಹೋಗಿದ್ದಾರೆ. ಪೊಲೀಸರಿಗೆ ದೂರು ನೀಡಿದಲ್ಲಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪರ್ವೇಜ್ ಪೊಲೀಸರಿಗೆ ದೂರು ನೀಡಿದ್ದಾರೆ.
ಗಾಯಗೊಂಡ ಪರ್ವೇಜ್ ಉಮರ್ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಲ್ಲೆ ಆರೋಪಿಗಳು ಪತ್ತೆಯಾಗಿಲ್ಲ. ಮಣಿಪಾಲದಲ್ಲಿ ಯುವಕರ ನಡುವಿನ ಗಲಾಟೆ ಗಮನಿಸಿದ್ದ ಸಾರ್ವಜನಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ರಾತ್ರಿ ಎರಡು ಮೂರು ತಂಡವಾಗಿ ಮಣಿಪಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದರು. ಸಿಸಿ ಟಿವಿ ಪರಿಶೀಲಿಸಲಾಗಿದ್ದು, ಶೀಘ್ರ ಆರೋಪಿಗಳನ್ನುಪತ್ತೆ ಮಾಡುವುದಾಗಿ ಮಣಿಪಾಲ ಎಸ್‌ಐ ದೇವರಾಜ್ ತಿಳಿಸಿದ್ದಾರೆ.